ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ಶೌಚಾಲಯ ನಿರ್ಮಾಣ ಮಾಡಿಲ್ಲ- ಸಂಸದ ತೇಜಸ್ವಿ ಸೂರ್ಯ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ಶೌಚಾಲಯ ನಿರ್ಮಾಣ ಮಾಡಿಲ್ಲ. ಈಗ ಗ್ಯಾರೆಂಟಿ ಕಾರ್ಡ್ ಕೊಡಲು ಬಂದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ, ಮಾರ್ಚ್ 22: ಕಾಂಗ್ರೆಸ್‌ನವರಿಗೆ ದೇಶದಲ್ಲಿ 70 ವರ್ಷದ ಆಡಳಿತದಲ್ಲಿ ಹೈವೈ ಹಾಗೂ ರೈಲ್ವೆ ಲೈನು ಮಾಡಲು ಆಗಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ಶೌಚಾಲಯ ನಿರ್ಮಾಣ ಮಾಡಿಲ್ಲ. ಈಗ ಗ್ಯಾರೆಂಟಿ ಕಾರ್ಡ್ ಕೊಡಲು ಬಂದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕುರುಗೋಡು ಪಟ್ಟಣದಲ್ಲ ಮಂಗಳವಾರ ಸಂಜೆ ಏರ್ಪಡಿಸಿದ್ದ ಯುವ ಚೈತನ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಿನ್ನೆ ಬೆಳಗಾವಿಯಲ್ಲಿ ಪದವೀಧರರಿಗೆ 3 ಸಾವಿರ ರೂಪಾಯಿ, ಡಿಪ್ಲೊಮಾ ಪದವೀಧರರಿಗೆ 1500 ರೂಪಾಯಿ. ಕೊಡುವುದಾಗಿ ಹೇಳಿದರು. ರಾಹುಲ್ ಗಾಂಧಿ ಅವರ ಹೇಳಿಕೆ ಕೇಳಿ ನನಗೆ ಆಶ್ಚರ್ಯ ಆಯ್ತು ಎಂದು ಹೇಳಿದರು.

ಮಾತು ಮುಂದುವರಿಸಿದ ಸಂಸದ ತೇಜಸ್ವಿ ಸೂರ್ಯ, ದೇಶದಲ್ಲಿ ಸ್ವಾಭಿಮಾನಿ ಯುವಕರು ಭಿಕ್ಷೆ ಬೇಡುವುದಿಲ್ಲ. ರಾಹುಲ್ ಗಾಂಧಿ ಜೀವನದಲ್ಲಿ ಸಂಬಳಕ್ಕೆ ಹೋಗಿಲ್ಲ. ಇನ್ನೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಲ್ಲಿ ಪಾಕೆಟ್ ಹಣ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರದ್ಧ ವ್ಯಂಗ್ಯವಾಡಿದರು.
ಯುವಕರ ಸ್ವಾವಲಂಬನೆ ಜೀವನಕ್ಕೆ ಮುದ್ರಾ ಯೋಜನೆ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಗ್ಯಾರೆಂಟಿ ಇಲ್ಲ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ನೂರಕ್ಕೂ ನೂರಕ್ಕೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.

ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಪಕ್ಷ ಬಿಜೆಪಿ
ಯುವ ಚೈತನ್ಯ ಸಮಾವೇಶದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಟಿ. ಎಚ್.ಸುರೇಶ್ ಬಾಬು ಮಾತನಾಡಿ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಪಕ್ಷ ಬಿಜೆಪಿ. ನಾನು 25 ವರ್ಷದ ಯುವಕನಾಗಿದ್ದಾಗ ಬಿಜೆಪಿ ಟಿಕೆಟ್ ನೀಡಿದೆ. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ ಎಂದು ಹೇಳಿದರು.
ಇವತ್ತು ನಮ್ಮ ಬಿಜೆಪಿ ಸರ್ಕಾರ ಇದೆ. ನಾವು ಯಾವತ್ತೂ ದೌರ್ಜನ್ಯ ಮಾಡುವುದಿಲ್ಲ. ಕಾಂಗ್ರೆಸ್‌ನವರು ನಮ್ಮ ಬ್ಯಾನರ್‌ಗಳನ್ನು ತೆಗೆಸಿದ್ದಾರೆ. ನಾನು ಶಾಸಕನಿದ್ದಾಗ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿದ ಟಿ. ಎಚ್.ಸುರೇಶ್ ಬಾಬು ಈಗಿನ ನಮ್ಮ ಬಿಜೆಪಿ ಸರ್ಕಾರ ಕೂಡ ಕಂಪ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದೆ. ದೊಡ್ಡ ಬಸವೇಶ್ವರ ದೇವಸ್ಥಾನ ಬಳಿ ಈ ಬಗ್ಗೆ ಚರ್ಚೆಗೆ ಬರಲು ನಾನು ಸಿದ್ಧ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಸವಾಲು ಹಾಕಿದರು.
ಮಾತು ಮುಂದುವರಿಸಿದ ಅವರು, ಬಿಜೆಪಿ ಅವರು ಕಂಪ್ಲಿ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಕಂಪ್ಲಿ ಕ್ಷೇತ್ರವನ್ನು ಈಗ ಕಮಿಷನ್ ಕ್ಷೇತ್ರ ಅಂತಾ ಕರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ವ್ಯಂಗ್ಯವಾಡಿದರು. ಕುರುಗೋಡು, ಕಂಪ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ ಎಂದು ಹೇಳಿದ ಸುರೇಶಬಾಬು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆ ಭೂಮಿಪೂಜೆ ಮಾಡಿದ್ದರು. ಆದರೂ ಕಾಂಗ್ರೆಸ್ ಶಾಸಕ ಗಣೇಶ್ ಮತ್ತೆ ಪೂಜೆ ಮಾಡಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications