ಮುಂಗಾರು ಹಂಗಾಮು 2025: ಮಾಗಿ ಉಳುಮೆ ಮಾಡಲು ರೈತರಿಗೆ ಸಲಹೆ
ಬಳ್ಳಾರಿ, ಮೇ 12: ಜೂನ್ ತಿಂಗಳ ಆರಂಭಕ್ಕೂ ಮೊದಲು ಮುಂಗಾರು ರಾಜ್ಯ ಪ್ರವೇಶ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ, ಆದ್ದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿವೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ವ್ಯವಸಾಯ ಆರಂಭಿಸಲು ರೈತರು ತಯಾರಿಯನ್ನು ನಡೆಸಿದ್ದಾರೆ.
ಮುಂಗಾರು ಆಗಮನದ ಹಿನ್ನಲೆಯಲ್ಲಿ ಬಳ್ಳಾರಿಯ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ರೈತರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಪ್ರಸ್ತಕ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವುದರಿಂದ ರೈತರು ತಮ್ಮ ಜಮೀನಿನಲ್ಲಿ ಮಾಗಿ ಉಳುಮೆ ಮಾಡಿಕೊಂಡು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ತಮ್ಮ ಜಮೀನುಗಳಿಗೆ ಸೇರಿಸಬೇಕು ಎಂದು ಹೇಳಿದ್ದಾರೆ.

ಮಾಗಿ ಉಳುಮೆ ಎಂದರೆ ಎಂ. ಬಿ. ನೇಗಿಲು, ಡಿಸ್ಕ್ ಪ್ಲೋ ಅಂತಹ ಯಂತ್ರೋಪಕರಣಗಳನ್ನು ಬಳಸಿ, ಇಳಿಜಾರಿನ ಅಡ್ಡಕ್ಕೆ ಹೊಲವನ್ನು ಆಳವಾದ ಉಳುಮೆ. ಮಣ್ಣಿನ ಹೊರಪದರವನ್ನು ತೆರೆದು ಸೂರ್ಯನ ಕಿರಣಗಳಿಂದ ಸೋಂಕು ರಹಿತಗೊಳಿಸಲು ಕೆಳಗಿನ ಮಣ್ಣನ್ನು ತಿರುಗಿಸುವುದಾಗಿದೆ.
ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು
* ಮಾಗಿ ಉಳುಮೆಯಿಂದ ಮಣ್ಣಿನ ಗಟ್ಟಿಯಾದ ಹೊರಪದರವನ್ನು ಒಡೆದು ಆಳವಾದ ಉಳುಮೆ ಮಾಡುವುದರಿಂದ ನೀರಿನ ಇಂಗುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮಣ್ಣು ಹೆಚ್ಚಿನ ನೀರನ್ನು ಹಿಡಿದುಕೊಂಡು ಸುಲಭವಾಗಿ ಗಿಡಗಳಿಗೆ ದೊರೆಯುವಂತೆ ಮಾಡುತ್ತದೆ.
* ಮಾಗಿ ಉಳುಮೆಯಲ್ಲಿ ಪರ್ಯಾಯ ಬಿಸಿಲಿನಿಂದ ಒಣಗಿಸುವಿಕೆ ಹಾಗೂ ಗಾಳಿಯಿಂದ ತಂಪಾಗಿಸುವಿಕೆಯಿಂದಾಗಿ ಮಣ್ಣಿನ ರಚನೆಯು ಸುಧಾರಿಸುತ್ತದೆ. ಮಣ್ಣಿನ ಗಾಳಿಯನ್ನು ಸುಧಾರಿಸುವುದರಿಂದ ಸೂಕ್ಷ್ಮಜೀವಿಗಳ ಉತ್ಪತ್ತಿಯು ಹೆಚ್ಚಾಗಿ ಸಾವಯವ ಗೊಬ್ಬರಗಳು ಕರಗಿ ಪೋಷಕಾಂಶಗಳ ಲಭ್ಯತೆಯು ಹೆಚ್ಚುತ್ತದೆ ಎಂದಿದ್ದಾರೆ.
* ಮಳೆಯನ್ನು ಹೀರಿಕೊಳ್ಳುವ ಮಣ್ಣಿನ ಸಾಮರ್ಥ್ಯವು ಬೆಳೆದಂತೆ ವಾತಾವರಣದಲ್ಲಿ ಲಭ್ಯವಿರುವ ಸಾರಜನಕ ನೀರಿನಲ್ಲಿ ಕರಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಣ್ಣಿನಡಿಯಲ್ಲಿ ಅಡಗಿರುವ ಅನೇಕ ಕೀಟಗಳ ಮೊಟ್ಟೆ, ಮರಿಹುಳು ಮತ್ತು ಕೋಶಗಳು ಸೂರ್ಯನ ಅತಿಯಾದ ಬಿಸಿಲಿನ ಶಾಖದಿಂದ ಸತ್ತುಹೊಗಿ ಮುಂದಿನ ಬೆಳೆಗಳ ಮೇಲೆ ಕೀಟಗಳ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
* ಬಿಸಿಲಿನ ಶಾಖಕ್ಕೆ ಅನೇಕ ಬ್ಯಾಕ್ಟೀರಿಯಾ ಬೀಜಕಗಳು, ಶಿಲೀಂದ್ರಗಳು ಮತ್ತು ಸೂಕ್ಷಜೀವಿಗಳು ಸಾಯುತ್ತವೆ, ಇದರಿಂದ ಮುಂದಿನ ಬೆಳೆಗಳಿಗೆ ಉಂಟಾಗುವ ರೋಗಗಳನ್ನು ತಪ್ಪಿಸಿ ಕೀಟ ಮತ್ತು ರೋಗನಾಶಕಗಳಿಗೆ ತಗಲುವ ವೆಚ್ಚವನ್ನು ಉಳಿಸುತ್ತದೆ. ಮಾಗಿ ಉಳಿಮೆಯಿಂದ ನೆಮಟೋಡ್ ಬಾಧೆಯನ್ನು ತಪ್ಪಿಸಬಹುದು. ಮಾಗಿ ಉಳುಮೆಯು ಕಳೆಗಳು ಮೊಳಕೆಯೊಡೆಯುವುದನ್ನು ತಡೆಯುತ್ತದೆ ಇದರಿಂದ ಕಳೆಗಳ ನಿಯಂತ್ರಣವನ್ನು ಮಾಡಬಹುದು.
* ಮಾಗಿ ಉಳುಮೆಯಿಂದ ಹೆಚ್ಚಿನ ಮಳೆ ನೀರು ಸಂಗ್ರಹಣೆ, ಪೋಷಕಾಂಶಗಳ ಸಮತೋಲನ ಮತ್ತು ಮಣ್ಣಿನ ಗುಣಧರ್ಮಗಳ ಸುಧಾರಣೆಯಿಂದ ಹೆಚ್ಚಿನ ಬೆಳೆ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಹಾಗಾಗಿ ರೈತ ಬಾಂಧವರು ಮಾಗಿ ಉಳುಮೆಯ ಈ ಎಲ್ಲಾ ಪ್ರಯೋಜನೆಗಳಿಂದ ಕಡಿಮೆ ಖರ್ಚು ಮಾಡಿ ಹೆಚ್ಚಿನ ಇಳುವರಿ ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಕೊಳ್ಳಬಹುದು ಎಂದು ಮನವಿ ಮಾಡಲಾಗಿದೆ.












Click it and Unblock the Notifications