ಸಂಡೂರು ತಾಲೂಕಿನ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನಗಳಿಗೆ ಗಣಿ ಕಂಟಕ
ಬಳ್ಳಾರಿ, ಆಗಸ್ಟ್, 24: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಸುಮಾರು 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ದೇವಸ್ಥಾನಗಳಿಗೆ ಇದೀಗ ಗಣಿ ಕಂಟಕ ಶುರುವಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವನಾಗಿರುವ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಕ್ಕೆ ಈಗ ಗಣಿ ಕಂಟಕ ಶುರುವಾಗಿದೆ. ಸ್ವಲ್ಪ ದೂರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಪದೇ ಪದೇ ಹಾನಿ ಆಗುತ್ತಲೇ ಇದ್ದು, ಇದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುಮಾರಸ್ವಾಮಿ (ಸ್ಕಂದಗಿರಿ) ಬೆಟ್ಟದ ಹಸಿರು ರಮಣೀಯ ಪ್ರದೇಶದಲ್ಲಿ 12ನೇ ಶತಮಾನದಲ್ಲಿ ಈ ಐತಿಹಾಸಿಕ ದೇವಸ್ಥಾನ ನಿರ್ಮಾಣವಾಗಿದೆ.
ನಾಡಿನ ಐತಿಹಾಸಿಕ ಆರಾಧ್ಯದೈವ ಕುಮಾರಸ್ವಾಮಿ ಮತ್ತು ಪಾರ್ವತಿ ದೇಗುಲಕ್ಕೆ ಕಳೆದ ಹತ್ತಾರು ವರ್ಷಗಳಿಂದ ಗಣಿ ಕಾಟ ಶುರುವಾಗಿದೆ. ದೇಗುಲದ ಸ್ವಲ್ಪ ದೂರದಲ್ಲಿರುವ ಬೆಟ್ಟದ ತಪ್ಪಲಲ್ಲಿ ಬ್ಲಾಸ್ಟಿಂಗ್ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಈ ಐತಿಹಾಸಿಕ ದೇವಸ್ಥಾನಗಳಿಗೆ ಕಂಟಕ ಶುರುವಾಗಿದೆ. 1200 ವರ್ಷಗಳ ಹಿಂದೆ ಚಾಲುಕ್ಯ ರಾಷ್ಟ್ರಕೂಟರು ನಿರ್ಮಿಸಿದ ದೇಗುಲಕ್ಕೆ ಕಂಟಕ ಬಂದೊದಗಿದ್ದು, ಪಾರ್ವತಿ ದೇಗುಲದ ಒಳಗಡೆ ಮಳೆ ಬಂದರೆ ಸಾಕು ನೀರು ಸೋರುವಿಕೆ ಉಂಟಾಗುತ್ತದೆ.

ಕುಸಿಯುತ್ತಿರುವ ಪಾರ್ವತಿ ದೇಗುಲದ ಕಲ್ಲು
ಇಂತಹ ಐತಿಹಾಸಿಕ ಸ್ಮಾರಕ ಪೌರಾಣಿಕವಾಗಿರುವ ಶಿಲ್ಪ ಕಲೆಯನ್ನು ರಾಷ್ಟ್ರದ ಕೆಲವೇ ದೇಗುಲಗಳು ಹೊಂದಿರುವುದು ವಿಶೇಷವಾಗಿದೆ. ಅಲ್ಲದೇ ಈ ದೇವಾಲಯಯ ಇತಿಹಾಸದ ಪುಟಗಳಲ್ಲಿಯೂ ದಾಖಲಾಗಿದೆ. ಈಗಾಗಲೇ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಗಳು 600 ಮೀಟರ್ ಸಮೀಪದಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ. ಆದ್ದರಿಂದ ಎರಡು ದೇವಸ್ಥಾನಗಳ ಕೆಲ ಭಾಗದಲ್ಲಿ ಬಿರುಕು ಬಿಟ್ಟಿವೆ. ಈಗ ಮತ್ತೆ ಐತಿಹಾಸಿಕ ಪಾರ್ವತಿ ದೇಗುಲದ ಕಲ್ಲು ಕುಸಿದು ಬಿದ್ದಿದ್ದು, ಅಪಾಯದ ಅಂಚಿನಲ್ಲಿರುವುದರಿಂದ ಭಕ್ತರ ಆತಂಕಕ್ಕೆ ಒಳಗಾಗಿದ್ದಾರೆ.

ಗಣಿಗರಿಕಾರಿಕೆ ನಿಷೇಧಕ್ಕೆ ಪಟ್ಟು
ಈ ಬೆಟ್ಟ ಸಮುದ್ರ ಮಟ್ಟದಿಂದ 3,000 ಅಡಿಗೂ ಹೆಚ್ಚು ಎತ್ತರದಲ್ಲಿದೆ. ಉತ್ತರ ಕರ್ನಾಟಕಕ್ಕೆ ಮುಕುಟವಿಟ್ಟಂತಿರುವ ಸ್ಮಾರಕವನ್ನ ದೇಗುಲದ ಸುತ್ತಳತೆಯಲ್ಲಿನ ಗಣಿ ಕುಣಿಕೆಯಿಂದ ಸಂರಕ್ಷಿಸಿಕೊಳ್ಳಲು ಎಲ್ಲಾ ಪ್ರಯತ್ನಗಳು ನಡೆದಿದ್ದವು. ಕಳೆದ ಹತ್ತಾರು ವರ್ಷಗಳಿಂದ ದೇಗುಲದ ಸುತ್ತಳತೆ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತರಹದ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಅನೇಕ ತರಹದ ಹೋರಾಟಗಳನ್ನು ಮಾಡಲಾಗಿತ್ತು. ಆದರೆ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇದುವರೆಗೆ ಗಣಿಗಾರಿಕೆ ನಿಷೇಧ ಆಗಿಲ್ಲ. ಇನ್ನೂ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಗಳು ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತಿವೆ.

ಗಣಿ ಕಂಪನಿಗಳಿಗೆ ಸರ್ಕಾರ ಶರಣಾಯಿತಾ?
ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುವ ಹೊಸಪೇಟೆ ತಾಲೂಕಿನ ಜಂಭುನಾಥ್ ಸ್ವಾಮಿ ದೇವಸ್ಥಾನದ 2 ಕಿಲೋ ಮೀಟರ್ ಸುತ್ತ ಗಣಿಗಾರಿಕೆ ನಡೆಸದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದೇ ಆದೇಶ ಐತಿಹಾಸಿಕ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಗಳಿಗೂ ವಿಸ್ತರಿಸಬೇಕು. ಸರ್ಕಾರ ಗಣಿ ಕಂಪನಿಗಳಿಗೆ ಮಣಿದ ಕಾರಣ ಇಲ್ಲಿ ಸುಪ್ರೀಂಕೋರ್ಟ್ ಆದೇಶ ಕೂಡ ಪಾಲನೆ ಆಗುತ್ತಿಲ್ಲ ಎನ್ನುವುದು ಇಲ್ಲಿನ ಸ್ಥಳೀಯರ ವಾದ ಆಗಿದೆ.

ದೇವಾಲಯಗಳ ಬಳಿ ಹೆಚ್ಚಾದ ಗಣಿಗಾರಿಕೆ
ಸರ್ಕಾರಗಳು ಈ ದೇವಾಲಯದ ಸಂರಕ್ಷಣೆಗಿಂತ ಗಣಿ ಕಂಪನಿಗಳಾದ ಜಿಂದಾಲ್, ಎಂಎಸ್‌ಪಿಎಲ್, ಎಂಎಂಎಲ್, ಎನ್‌ಎಂಡಿಸಿಯಂತಹ ಉದ್ಯಮಿಗಳ ಸಂರಕ್ಷಣೆಯೇ ಹೆಚ್ಚಾದಂತೆ ಕಾಣುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಸಾವಿರಾರು ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಈ ಐತಿಹಾಸಿಕ ದೇವಸ್ಥಾನಗಳನ್ನು ರಕ್ಷಣೆ ಮಾಡದೇ ಸರ್ಕಾರ ಗಣಿ ಕಂಪನಿಗಳ ಲಾಭಿಗೆ ಮಣಿದಿರುವುದು ದುರಂತವೇ ಸರಿ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಗಣಿಗಾರಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ದೇವಸ್ಥಾನದ ಅಕ್ಕಪಕ್ಕ ಗಣಿಗಾರಿಕೆ ಮಾಡದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಅಭಿಪ್ರಾಯ ಆಗಿದೆ.












Click it and Unblock the Notifications