ಬಳ್ಳಾರಿ, ವಿಜಯನಗರ ಸಾರಿಗೆ ಇಲಾಖೆ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ
ಬಳ್ಳಾರಿ, ಸೆಪ್ಟೆಂಬರ್, 30: ಲೋಕಾಯುಕ್ತ ಪೊಲೀಸರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಏಕಕಾಲಕ್ಕೆ ಸಾರಿಗೆ ಇಲಾಖೆ ಚೆಕ್ ಪೋಸ್ಟ್ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿ, ಬಿಸಿ ಮುಟ್ಟಿಸಿದ್ದಾರೆ.
ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನೆಪದಲ್ಲಿ ಸರಕು ಸಾಗಾಣೆಯ ಭಾರಿ ವಾಹನಗಳು ಮತ್ತು ಇತರೆ ವಾಹನ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಹೊಸಪೇಟೆ ನಗರದ ಹೊರವಲಯದ ಶನೇಶ್ವರ ದೇವಾಲಯ ಸಮೀಪದ ವಾಹನ ತಪಾಸಣಾ ಕೇಂದ್ರಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿಎಸ್‌ಪಿ ಅಯ್ಯನಗೌಡ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಹಣ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಗೋಡೆಹಾಳ್ ಆರ್‌ಟಿಓ ಚೆಕ್‌ಪೋಸ್ಟ್ ಮೇಲೆ ದಾಳಿ
ಅದರಂತೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇರುವ ಗೋಡೆಹಾಳ್‌ನ ಆರ್‌ಟಿಓ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಪುರುಷೋತ್ತಮ್ ಮತ್ತು ಡಿವೈಎಸ್‌ಪಿ ರಾಮರಾವ್ ನೇತೃತ್ವದ ತಂಡ ಇಂದು ಬೆಳಗ್ಗೆ ದಾಳಿ ಮಾಡಿದ್ದು, ಎರಡೂವರೆ ತಾಸುಗಳ ಕಾಲ ದಾಖಲೆಗಳ ಪರಿಶೀಲನೆಯನ್ನು ಮಾಡಿದೆ. ಆಂಧ್ರಪ್ರದೇಶದ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಗಡಿಭಾಗದಿಂದ ಪ್ರತಿನಿತ್ಯ ನೂರಾರು ವಾಹನಗಳು ಬಳ್ಳಾರಿ ಕಡೆಗೆ ಬರುತ್ತವೆ. ವಾಹನಗಳ ದಾಖಲೆ ಪರಿಶೀಲನೆ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ದಾಖಲೆಗಳನ್ನು ಸರಿಯಾಗಿ ಚೆಕ್ ಮಾಡುತ್ತಿಲ್ಲ, ತಪಾಸಣೆಯ ನೆಪದಲ್ಲಿ ಹಣ ಪಡೆಯುತ್ತಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳ ತಂಡವು ಅಲ್ಲಿನ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ದಾಖಲೆ ಸೇರಿದಂತೆ ಇತರ ವಿಷಯದ ಕುರಿತಾಗಿ ಪರಿಶೀಲನೆ ನಡೆಸಿದೆ. ದಾಳಿ ಸಂದರ್ಭದಲ್ಲಿ ಹಣ ಸಿಕ್ಕಿದ್ದು, ಅಲ್ಲಿನ ಸಿಬ್ಬಂದಿಯನ್ನು ಹಣವನ್ನು ವಶಕ್ಕೆ ಪಡೆದು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ರಫೀಕ್ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ 12 ಜನರು ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

ಹೆಚ್ಚಿನ ಶುಲ್ಕ ಪಡೆಯುತ್ತಾರೆಂಬ ಆರೋಪ
ಇನ್ನು ದಸರಾ ಹಬ್ಬ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮೇಲೆ ಆರ್‌ಟಿಓ ಅಧಿಕಾರಿಗಳು ದಾಳಿ ಮಾಡಿದ್ದು, ಬೆಂಗಳೂರು ಹಾಗೂ ಹೊಸದುರ್ಗಕ್ಕೆ ಓಡಾಡುತ್ತಿದ್ದ ಎರಡು ಖಾಸಗಿ ಬಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ತುಮಕೂರು ಆರ್‌ಟಿಓ ಇನ್ಸ್‌ಪೆಕ್ಟರ್ ಷರೀಪ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಸರಾ ಹಬ್ಬಕ್ಕೆ ಹೆಚ್ಚಿನ ಶುಲ್ಕ ಪಡೆಯುತ್ತಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಪರ್ಮಿಟ್ ಹಾಗೂ ಟ್ಯಾಕ್ಸ್ ಇಲ್ಲದೇ ಓಡಾಡುತ್ತಿರುವ ಬಸ್ಗಳ ಮೇಲೂ ದಾಳಿ ಮಾಡಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಓಡಿಸಲು ಪರ್ಮಿಟ್ ಇರುವ ಬಸ್ಗಳು, ಆದರೆ ಬೆಂಗಳೂರಿನಿಂದ ಹೊಸದುರ್ಗ ನಡುವೆ ಬಸ್ಗಳು ಓಡಾಟ ಮಾಡುತ್ತಿದ್ದವು. ಬೆಂಗಳೂರಿನಲ್ಲಿ ಫ್ಯಾಕ್ಟರಿಗಳಿಗೆ ಓಡಾಡಲು ಬಳಸುವ ಬಸ್ನಲ್ಲಿ ಪ್ರಯಾಣಿಕರಿದ್ದ ಕಾರಣ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ನಂಗಲಿ ಆರ್‌ಟಿಓ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಎಸ್‌ಪಿ ಉಮೇಶ್ ನೇತೃತ್ವದ ತಂಡ ದಾಳಿ ಮಾಡಿದೆ. ಗಡಿ ಭಾಗದಲ್ಲಿ ವಾಹನಗಳಿಂದ ಹಣ ವಸೂಲಿ ಆರೋಪ ಹಿನ್ನೆಲೆ ದಾಳಿ ಮಾಡಿದ್ದು, ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಗನೊಳ್ಳಿ ಬಳಿಯ ಚೆಕ್ ಪೋಸ್ಟ್ ಮೇಲೆ ದಾಳಿ
ಅದೇ ರೀತಿಯಾಗಿ ವಿಜಯಪುರ ಜಿಲ್ಲೆಯ ಹೊಸಪೇಟೆಯ ಹೊರವಲಯದ ಶನೇಶ್ವರ ದೇವಾಲಯದ ಬಳಿ ಇರಿವ ಆರ್‌ಟಿಓ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿದ್ದಾರೆ. ಡಿವೈಎಸ್‌ಪಿ ಅಯ್ಯನಗೌಡ ನೇತೃತ್ವದಲ್ಲಿ ದಾಳಿ ಮಾಡಿದ್ದು, ದಾಳಿ ವೇಳೆ ಯಾರೂ ಇರಲಿಲ್ಲ ಎಂಬ ಮಾಹಿತಿ ನೀಡಲಾಗಿದೆ. ಭಾರಿ ವಾಹನಗಳು ಸೇರಿದಂತೆ ಇತರೆ ವಾಹನ ಚಾಲಕರ ಬಳಿ ಹಣ ವಸೂಲಿ ಆರೋಪ ಕೇಳಿಬಂದಿದ್ದು, ದೂರಿನ ಆಧಾರದ ಮೇಲೆ ದಾಳಿ ಮಾಡಲಾಗಿದೆ ಎನ್ನಲಾಗಿದೆ. ಇನ್ನು ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಯ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಚೆಕ್ ಪೋಸ್ಟ್ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ಚೆಕ್‌ಪೋಸ್ಟ್‌ನಲ್ಲಿ ನಗದು ಪತ್ತೆ ಆಗಿದೆ.












Click it and Unblock the Notifications