Karnataka Elections 2023: ಕಾಂಗ್ರೆಸ್ ಸೇಪರ್ಡೆಯಾದ ಕೂಡ್ಲಿಗಿ ಬಿಜೆಪಿ ಶಾಸಕ
ಕೂಡ್ಲಿಗಿ, ಮಾರ್ಚ್, 28: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಬೆಳವಣಿಗೆಗಳು ಆಗುತ್ತಲೇ ಇವೆ. ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದು, ಎಲ್ಲಾ ಪಕ್ಷಗಳಲ್ಲಿ ಇದೀಗ ಬಂಡಾಯದ್ದೇ ಚಿಂತೆ ಆಗಿದೆ. ಇದೇ ರೀತಿ ಇಂದು ಕೂಡ್ಲಿಗಿ ಬಿಜೆಪಿ ಶಾಸಕ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಶಾಸಕ ಗೋಪಾಲಕೃಷ್ಣ ಅವರು ನಿನ್ನೆ ಕಾಂಗ್ರೆಸ್ ಮುಖಂಡರನ್ನು ಭೇಟಿ ಆಗಿದ್ದು, ಇಂದು ಕೊನೆಗೂ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೂಡ್ಲಿಗಿ ವಿಧಾಸಭಾ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮಾಜಿ ಶಾಸಕ
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾಯಕನಹಟ್ಟಿಯಲ್ಲಿ ರಾಜಕೀಯ ವಿಚಾರಕ್ಕೆ ಕಾಂಗ್ರೆಸ್, ಬಿಜೆಪಿ ನಡುವೆ ಗಲಾಟೆ ನಡೆದಿತ್ತು. ಇದೇ ಸ್ಥಳದಲ್ಲೇ ಬದ್ಧವೈರಿಗಳಿಬ್ಬರೂ ಒಂದಾಗಿರುವ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ನಿಂತಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರು ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸಮ್ಮುಖದಲ್ಲಿ ರಾಜಿಯಾಗಿದ್ದರು. ಹಾಗೆಯೇ ತಿಪ್ಪೇಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು.
ಸಿ.ಟಿ.ರವಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಪ್ಲಾನ್
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಆಪ್ತ ಹೆಚ್‌ಡಿ ತಮ್ಮಯ್ಯ ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದರು. ಆಪ್ತನನ್ನೇ ಆಪರೇಷನ್ ಮಾಡಿ ಸಿ.ಟಿ.ರವಿ ವಿರುದ್ಧ ಚುನಾವಣೆಗೆ ಇಳಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ.
ತಮ್ಮಯ್ಯನವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತರೂ ಆಗಿದ್ದು, ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಇದೀಗ ಕಾಂಗ್ರೆಸ್ ಚಿಕ್ಕಮಗಳೂರಿನಲ್ಲಿ ತಮಗೆ ಪ್ರಬಲ ಅಭ್ಯರ್ಥಿ ಇಲ್ಲ ಎಂಬ ಕಾರಣಕ್ಕೆ ನಿರಾತಂಕದಲ್ಲಿರುವ ಸಿ.ಟಿ. ರವಿಗೆ ಶಾಕ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ.
ಇದರಂತೆಯೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹೆಚ್.ಡಿ. ತಮ್ಮಯ್ಯನವರು ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ತಮ್ಮಯ್ಯನ ಜೊತೆ 300ಕ್ಕೂ ಹೆಚ್ಚು ಬೆಂಬಲಿಗರು ಡಿ.ಕೆ.ಶಿವಕುಮಾರ್ ಹಾಗೂ ಬಿ.ಎಲ್.ಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದರು.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿರುವ ತಮ್ಮಯ್ಯ, ನಾನು ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆ ಆಗುತ್ತಿದ್ದೇನೆ. ಬಿಜೆಪಿಯಲ್ಲಿ 17-18 ವರ್ಷಗಳ ಕಾಲ ಇದ್ದೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಸಂತೋಷದಿಂದ ಸೇರಿದ್ದೇನೆ. ಡಿಕೆಶಿ ಅಧ್ಯಕ್ಷರಾದ ಮೇಲೆ ಇಡೀ ರಾಜ್ಯದಲ್ಲಿ ಒಂದು ಸಂಚಲನ ಮೂಡಿದೆ. ಸಿದ್ದರಾಮಯ್ಯ ಕೂಡಾ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವರಿಬ್ಬರ ನೇತೃತ್ವ ಒಪ್ಪಿ ತುಂಬಾ ಜನರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ಇದನೆಲ್ಲ ಗಮನಿಸಿದರೆ ಈ ಬಾರಿಯ ಚುನಾವಣೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗಳು ಆಗುವ ಎಲ್ಲ ಲಕ್ಷಣಗಳು ಎದ್ದುಕಾಣುತ್ತಿವೆ. ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಬಂಡಾಯದ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿಜೆಪಿಪಿಯಿಂದ ಕಾಂಗ್ರೆಸ್ ಸೇರುವವರ ಸಂಖ್ಯೆಯು ಹೆಚ್ಚಾಗಿದೆ. ಇದರಿಂದ ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತಲೇ ಇದೆ.
ಮತ್ತೊಂದೆಡೆ ಕಾಂಗ್ರೆಸ್, ಜೆಡಿಎಸ್‌ನಿಂದ ಬೇರೆ ಪಕ್ಷಗಳಿಗೆ ಸೇರ್ಪಡೆಯಾದವರ ಸಂಖ್ಯೆ ಕಡಿಮೆಯಿದೆ. ಆದ್ರೆ ಇದೀಗ ಎಲ್ಲಾ ಪಕ್ಷಗಳಲ್ಲೂ ಬಂಡಾಯದ್ದೇ ಚಿಂತೆ ಆಗಿದೆ. ಒಟ್ಟಿನಲ್ಲಿ ಕೊನೆಗೆ ಯಾವ ಪಕ್ಷ ಗದ್ದುಗೆ ಏರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications