ಹಿಂಡಲಗಾ ಜೈಲಿನಲ್ಲಿರುವ ಜೆ.ಎಚ್ ಪೂಜಾರ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ: ಕೆ.ಎಸ್.ಈಶ್ವರಪ್ಪ
ಬಳ್ಳಾರಿ, ಏಪ್ರಿಲ್ 14: ಹಿಂಡಲಗಾ ಜೈಲಿನಲ್ಲಿರುವ ಜೆ.ಎಚ್ ಪೂಜಾರ ಅಲಿಯಾಸ್ ಶಾಹಿರ್ ಶೇಖ್, ನಾಗ್ಪುರ ಪೊಲೀಸರ ತನಿಖೆ ವಿಚಾರದಲ್ಲಿ ಬಂಧಿತನಾಗಿದ್ದಾನೆ. ಈತ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎಂದು ಈಗಷ್ಟೇ ಮಾಹಿತಿ ಸಿಕ್ಕಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಳ್ಳಾರಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ಕೇಳಿ ನನಗೆ ಆಘಾತವಾಯಿತು. ಇದೇ ಆರೋಪಿ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ. ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಆರಗ ಜ್ಞಾನೇಂದ್ರ ಅವರು ನನಗೆ ಫೋನ್ ಮಾಡಿ ತಿಳಿಸಿದರು ಎಂದು ಈಶ್ವರಪ್ಪ ಹೇಳಿದ್ದಾರೆ.

ಈ ಹಿಂದೆ ನನಗೆ ಹಿಂದುತ್ವ ಪ್ರತಿಪಾದಿಸಿ ಮಾತಾಡಿದಾಗ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯ ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಆಗ ಭದ್ರತೆ ನೀಡಿದ್ದರು ಎಂದು ಹೇಳಿದ ಅವರು, ನನ್ನ ಕೊಲೆ ಸ್ಕೆಚ್ ಬಗ್ಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾವು ಹೆದರುವವರಲ್ಲ ಎಂದರು.
ಚುನಾವಣಾ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಮೊನ್ನೆ ರಾಜ್ಯದ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್ ಅವರು ಫೋನ್ ಮಾಡಿ ಮಾತನಾಡಿದರು. ನೀವು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಎಂಬ ರೀತಿಯಲ್ಲಿ ರಾಜೀನಾಮೆ ಕಳಿಸಬಾರದು ಎಂದು ಹೇಳಿದರು. ಫಾರ್ಮ್ಯಾಟ್ ಕಳಿಸುವಂತೆ ಹೇಳಿರುವೆ. ಅವರು ಕಳಿಸಿದ ಫಾರ್ಮ್ಯಾಟ್‌ನಲ್ಲಿ ರಾಜೀನಾಮೆ ಪತ್ರ ಕಳಿಸುವೆ ಎಂದರು.

ನನಗೆ ಟಿಕೆಟ್ ಸಿಕ್ಕಿಲ್ಲ. ಯಾರಿಗೆ ಸಿಗಲಿ, ಬಿಡಲಿ ನಾನು ಟಿಕೆಟ್ ಕೊಡಿ ಎಂದು ಕೇಳಲ್ಲ. ನನಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ ಎಂದು ಹೇಳಿದ ಈಶ್ವರಪ್ಪ, ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾನಮಾನ, ಹುದ್ದೆ ನೀಡಿದೆ. ನಾನು ಬೂತ್ ಮಟ್ಟದಲ್ಲಿ ಕಾರ್ಯಕರ್ತ ಆಗಿದ್ದವನು. ಈ ಹಂತಕ್ಕೆ ಬಂದಿರುವೆ. ಪಕ್ಷ ಚುನಾವಣಾ ರಾಜಕೀಯದಿಂದ ನಿವೃತ್ತ ಆಗಬೇಕೆಂದು ಹೇಳಿದರೆ ಅದನ್ನು ನಾನು ಒಪ್ಪುವೆ, ಪಕ್ಷ ನೀಡುವ ಎಲ್ಲ ಕೆಲಸಗಳನ್ನು ಮಾಡುವೆ ಎಂದರು.
ಒಂದು ಕಾಲದಲ್ಲಿ ನಮ್ಮ ಪಕ್ಷದಿಂದ ನಿಲ್ಲಲು ಅಭ್ಯರ್ಥಿಗಳೇ ಇರಲಿಲ್ಲ. ಈಗ ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವುದಾದರೆ ಇದು ನಮಗೆ ಹೆಮ್ಮೆಯ ವಿಶೇಷ ಕೆ.ಎಸ್.ಈಶ್ವರಪ್ಪ ಅವರು, ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವವರು ಪಕ್ಷಕ್ಕೆ ನಿಷ್ಠರಲ್ಲ ಎಂದರ್ಥ. ಹೋಗುವವರು ಹೋಗಲಿ. ಅದು ಅವರ ವೈಯಕ್ತಿಕ ತೀರ್ಮಾನ ಎಂದರು.
ಕುಟುಂಬ ಸಮೇತರಾಗಿ ಬಳ್ಳಾರಿಗೆ ಬಂದಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಳ್ಳಾರಿಯಲ್ಲಿರುವ ತಮ್ಮ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿ ಮುಖಂಡ ರಾಮಲಿಂಗಪ್ಪ ಮೊದಲಾದವರು ಹಾಜರಿದ್ದರು.












Click it and Unblock the Notifications