ಎರಡೂವರೆ ಲಕ್ಷ ಖಾಸಗಿ ಶಾಲೆ ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಿ
ಹಗರಿಬೊಮ್ಮನಹಳ್ಳಿ, ಮೇ 12: ಕೊರೊನಾ ದಾಳಿಯಿಂದ ಖಾಸಗಿ ಶಾಲೆಗಳು ತೆರೆಯದೇ ಇತ್ತ ವೇತನವೂ ಇಲ್ಲದೇ ಪರದಾಡುತ್ತಿರುವ ಎರಡೂವರೆ ಲಕ್ಷ ಖಾಸಗಿ ಶಿಕ್ಷಕರಿಗೆ ಸಿಎಂ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಎರಡೂವರೆ ಲಕ್ಷ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಆಡಳಿತ ಮಂಡಳಿಗಳು ವೇತನ ನೀಡದೇ ಶಿಕ್ಷಕ ಮತ್ತು ಸಿಬ್ಬಂದಿಗಳ ಬದುಕು ಸಂಕಷ್ಟದಲ್ಲಿದ್ದು ಸರ್ಕಾರ ಇವರ ನೆರವಿಗೆ ಧಾವಿಸಬೇಕು. ಜೊತೆಗೆ ಶಿಕ್ಷಣ ಸಚಿವ ಸುರೇಶ ಕುಮಾರ್ ಖಾಸಗಿ ಶಾಲಾ ಆಡಳಿತ ಮಂಡಳಿ ಸಭೆ ಕರೆದು ವೇತನ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದರು.
ಶಿಕ್ಷಕರ ಜೊತೆ ಟೈಲರ್ , ಮನೆಗೆಲಸದವರು. ಅಕ್ಕಸಾಲಿಗರು, ಕುಂಬಾರರು, ಕಮ್ಮಾರರು ಕೋರೋನಾ ಲಾಕ್‍ಡೌನ್‍ನಿಂದ ದುಡಿಮೆ ಇಲ್ಲದೇ ಪರದಾಡುತ್ತಿದ್ದು ಇವರೆಲ್ಲರಿಗೂ ಪ್ರತಿ ತಿಂಗಳು ಐದು ಸಾವಿರ ನೀಡುವ ಪ್ಯಾಕೇಜ್ ವಿಸ್ತರಿಸಲು ಪತ್ರೇಶ್ ಆಗ್ರಹಿಸಿದರು.