ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ಜಾತ್ರೆ ರದ್ದು
ಬಳ್ಳಾರಿ, ಡಿಸೆಂಬರ್ 25: ರೂಪಾಂತರಗೊಂಡ ಹೊಸ ಕೋವಿಡ್ ವೈರಸ್ ಸೋಂಕು ರಾಜ್ಯದಲ್ಲಿ ಹರಡದಂತೆ ತಡೆಗಟ್ಟಬೇಕಿದೆ. ಆದ್ದರಿಂದ, ಹೆಚ್ಚಿನ ಭಕ್ತರು ಸೇರುವ ರಥೋತ್ಸವವನ್ನು ನಿಷೇಧಿಸಿ ಬಳ್ಳಾರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಕೊಟ್ಟೂರಿನ ಗುರುಬಸವೇಶ್ವರ ಸ್ವಾಮಿ ದೇವಾಲಯ ಹಾಗೂ ಮದಲಘಟ್ಟ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಗಳ ಕಾರ್ತಿಕೋತ್ಸವ ಕಾರ್ಯಕ್ರಮ ಹಾಗೂ ಏಕ ಕಾಲದಲ್ಲಿ ಹೆಚ್ಚು ಜನ ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 28ರಂದು ನಡೆಯಬೇಕಿದ್ದ ಕೊಟ್ಟೂರಿನ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಾಲಯದ ಬೆಳ್ಳಿ ರಥೋತ್ಸವ ಮತ್ತು 2021ರ ಜನವರಿ 2 ಮತ್ತು 3ರಂದು ನಡೆಯಲಿದ್ದ ಮದಲಘಟ್ಟ ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ರದ್ದಾಗಿದೆ.

ಎರಡೂ ರಥೋತ್ಸವಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದರು. ಏಕಕಾಲದಲ್ಲಿ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ದೇವವಾಲಯದಲ್ಲಿ ಧಾರ್ಮಿಕ ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ.
ಗುರುವಾರದ ಮಾಹಿತಿಯಂತೆ ಬಳ್ಳಾರಿಯಲ್ಲಿ 28 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13,648. ಸಕ್ರಿಯ ಪ್ರಕರಣಗಳ ಸಂಖ್ಯೆ 31.












Click it and Unblock the Notifications