ಬಳ್ಳಾರಿಯ ಚಿಕ್ಕ ಗ್ರಾಮ ಚೆಳ್ಳಗುರ್ಕಿಗೆ ರಾಜ್ಯಪಾಲರ ಭೇಟಿ
ಬಳ್ಳಾರಿ, ಜುಲೈ 12; ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಎರಡು ದಿನಗಳ ಕಾಲ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳುವರು. ಬಳ್ಳಾರಿಯ ಚಿಕ್ಕ ಗ್ರಾಮ ಚೆಳ್ಳಗುರ್ಕಿಗೆ ಅವರು ಭೇಟಿ ನೀಡಲಿದ್ದು, ರಾಜ್ಯಪಾಲರನ್ನು ಸ್ವಾಗತಿಸಲು ಗ್ರಾಮದಲ್ಲಿ ಸಿದ್ಧತೆ ನಡೆದಿದೆ.
ರಾಜ್ಯಪಾಲರು ಚೆಳ್ಳಗುರ್ಕಿ ಗ್ರಾಮಕ್ಕೆ ಜುಲೈ 13ರ ಗುರುವಾರ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಸಿದ್ಧತೆ ಕುರಿತು ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅಧಿಕಾರಿಗಳ ಜೊತೆ ಸಭೆ ನಡಸಿದರು. ಹಲವು ಸೂಚನೆಗಳನ್ನು ನೀಡಿದರು.

ಬಳ್ಳಾರಿಯ ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರೆ. ಬುಧವಾರವೇ ಅವರು ಆಗಮಿಸಿ ಬಳ್ಳಾರಿಯ ಸರ್ಕಿಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗುರುವಾರ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಚೆಳ್ಳಗುರ್ಕಿ ಗ್ರಾಮ; ಗುರುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕ ಆಂಧ್ರ ಪ್ರದೇಶದ ಗಡಿ ಗ್ರಾಮವಾಗಿರುವ ಚೆಳ್ಳಗುರ್ಕಿಗೆ ಭೇಟಿ ನೀಡಲಿದ್ದಾರೆ. ಗ್ರಾಮದ ದೇವಾಲಯದ ಮುಂಭಾಗ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆಗಳ ಅನುಷ್ಠಾನದ ಮಾಹಿತಿ ಮತ್ತು ಸೌಲಭ್ಯ ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೌಲಭ್ಯದ ಬಗ್ಗೆ ಪರಿಶೀಲಿಸಲಾಗಿದೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಚ್ಛತೆ, ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಅಲ್ಲಿ ಸರ್ಕಾರಿ ಯೋಜನೆಗಳು ಅನುಷ್ಠಾನದ ಕುರಿತು ಜನಸಾಮಾನ್ಯರ ಜೊತೆ ರಾಜ್ಯಪಾಲರು ಮುಕ್ತವಾಗಿ ಚರ್ಚಿಸಲಿದ್ದಾರೆ.
ಸರ್ಕಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಕಲಿಕಾ ಮಾದರಿ ಹಾಗೂ ಮೂಲಭೂತ ಸೌಲಭ್ಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಆದ್ದರಿಂದ ಶಾಲೆಯ ವಾತವರಣ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸಿಇಒ ಸೂಚನೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಹ ರಾಜ್ಯಪಾಲರು ಸಂವಾದ ನಡೆಸುವ ನಿರೀಕ್ಷೆ ಇದೆ.
ಚೆಳ್ಳಗುರ್ಕಿ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪೂರಕ ವಿದ್ಯುತ್ ಸೌಲಭ್ಯ ಸೇರಿದಂತೆ ವಿವಿಧ ಸಿದ್ಧತೆಗಳ ಬಗ್ಗೆ ಅಂತಿಮ ಪರಿಶೀಲನೆ ಮಾಡಲಾಗಿದೆ. ಗ್ರಾಮದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆದುಕೊಂಡ ಫಲಾನುಭವಿಗಳ ಮಾಹಿತಿ ವರದಿಯನ್ನು ತಯಾರು ಮಾಡಲಾಗಿದೆ.
ರಾಜ್ಯಪಾಲರ ಜುಲೈ 13ರ ಕಾರ್ಯಕ್ರಮ
* ಜುಲೈ 12ರಂದು ರಾತ್ರಿ ಬಳ್ಳಾರಿಯ ಸರ್ಕಿಟ್ ಹೌಸ್‌ನಲ್ಲಿ ವಾಸ್ತವ್ಯ
* ಜುಲೈ 13ರ ಬೆಳಗ್ಗೆ 10ಕ್ಕೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಗೆ ಭೇಟಿ
* ವಿಶ್ವವಿದ್ಯಾಲಯದ ಆಡಳಿತ ಕಟ್ಟಡದ ಮೊದಲನೇ ಮಹಡಿ, ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಮಲ್ಟಿಡಿಸಿಪ್ಲಿನರಿ ಅಡ್ವಾನ್ಸ್ಡ್ ರಿಸರ್ಚ್ ಫೆಸಿಲಿಟಿ ಉದ್ಘಾಟನೆ.
* ಸಾಮಾನ್ಯ ವಿದ್ಯಾರ್ಥಿಗಳ ವಸತಿ ನಿಲಯ ಉದ್ಘಾಟನೆ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ
* ಮಧ್ಯಾಹ್ನ 2ಕ್ಕೆ ಚೆಳ್ಳಗುರ್ಕಿ ಗ್ರಾಮಕ್ಕೆ ಭೇಟಿ
* ಚೆಳ್ಳಗುರ್ಕಿ ಗ್ರಾಮದಿಂದ ಆಂಧ್ರಪ್ರದೇಶದ ಪೆನುಕೊಂಡಕ್ಕೆ ಸಂಚಾರ, ಅಲ್ಲಿಂದ ಬೆಂಗಳೂರಿಗೆ ಪ್ರಯಾಣ.
ಘಟಿಕೋತ್ಸದ ವಿಶೇಷತೆಗಳು; ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2021-22ನೇ ಸಾಲಿನ 11ನೇ ವಾರ್ಷಿಕ ಘಟಿಕೋತ್ಸವ ಜುಲೈ 13ರಂದು ವಿಶ್ವ ವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ಕವಿತಾ ಮಿಶ್ರಾ, ಹಿರೇಹಾಳ್ ಇಬ್ರಾಹಿಂ, ಪಂಡಿತ ಎಂ. ವೆಂಕಟೇಶ್ ಕುಮಾರ್ ಅವರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಕುಲಪತಿ ಪ್ರೊ. ಸಿದ್ದು ಆಲಗೂರು ಹೇಳಿದ್ದಾರೆ.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿವಿಧ ವಿಭಾಗಗಳ ಒಟ್ಟು 32 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.












Click it and Unblock the Notifications