Breaking: ಹೊಸ ಜಿಲ್ಲೆ ವಿಜಯನಗರದ ಡಿಸಿ, ಎಸ್‌ಪಿ ಬದಲಾವಣೆ
ವಿಜಯನಗರ, ನವೆಂಬರ್ 4: ನೂತನ ಜಿಲ್ಲೆ ವಿಜಯನಗರಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಟಿ. ವೆಂಕಟೇಶ್‌ರನ್ನು ನೇಮಕ ಮಾಡಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಬಳ್ಳಾರಿಯಿಂದ ವಿಭಜನೆ ಮಾಡಿದ ನಂತರ 31ನೇ ಜಿಲ್ಲೆಯಾಗಿ ರಚನೆಯಾಗಿದ್ದ ವಿಜಯನಗರಕ್ಕೆ ಮೊದಲ ಜಿಲ್ಲಾಧಿಕಾರಿಯಾಗಿ ವಿಶೇಷಾಧಿಕಾರಿಯಾಗಿದ್ದ ಅನಿರುದ್ಧ್ ಶ್ರಾವಣ್ ನೇಮಕವಾಗಿದ್ದರು. ಇದೀಗ ವರ್ಷದ ನಂತರ ಅವರನ್ನು ವರ್ಗಾವಣೆ ಮಾಡಲಾಗಿದೆ.
ವಿಜಯನಗರ ಜಿಲ್ಲೆ ರಚನೆಯಾದ ನಂತರ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ, ಜಿಲ್ಲೆರಚನೆಗೆ ಅವಶ್ಯವಿರುವ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಆಯುಕ್ತರಾಗಿದ್ದ ಅನಿರುದ್ಧ್ ಶ್ರವಣ್ ಅವರನ್ನು ವಿಶೇಷಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅನಿವೃದ್ಧ್ 2011ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದು, ಈ ಹಿಂದೆ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿಎಸಿಯಾಗಿ ಕೆಲಸ ನಿರ್ವಹಣೆ ಮಾಡಿದ್ದರು.

ಇದೀಗ ವಿಜಯನಗರಕ್ಕೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ವೆಂಕಟೇಶ್‌ರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದರೆ ಅನಿವೃದ್ಧ್ ಶ್ರಾವಣ್‌ರನ್ನು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂಬುದರ ಮಾಹಿತಿ ಇನ್ನೂ ಖಚಿತವಾಗಿಲ್ಲ.
ಪೊಲೀಸ್ ವರಿಷ್ಠಾಧಿಕಾರಿಯೂ ಬದಲಾವಣೆ; ಜಿಲ್ಲಾಧಿಕಾರಿಯಲ್ಲದೇ ವಿಜಯನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಅರುಣ್. ಕೆ ಯನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಶ್ರೀಹರಿ ಬಾಬುರನ್ನು ನೇಮಕ ಮಾಡಲಾಗಿದೆ. ಇವರು 2016ರ ಐಪಿಎಸ್ ಬ್ಯಾಚ್‌ನ ಅಧಿಕಾರಿಯಾಗಿದ್ದಾರೆ. ಬಳ್ಳಾರಿ ಎಸಿಬಿ ಎಸ್‌ಪಿಯಾಗಿದ್ದ ಇವರನ್ನು ಲೋಕಾಯುಕ್ತ ಎಸ್‌ಪಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ಮತ್ತೆ ವಿಜಯನಗರ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.












Click it and Unblock the Notifications