ಸಾರಿಗೆ ಸಚಿವ ಬಿ. ಶ್ರೀರಾಮುಲು ಹೀನಾಯ ಸೋಲಿಗೆ ಕಾರಣಗಳು
ಬಳ್ಳಾರಿ, ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೀನಾಯವಾಗಿ ಸೋಲು ಕಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮತ ಎಣಿಕೆ ಶನಿವಾರ ನಡೆಯುತ್ತಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಶ್ರೀರಾಮುಲು ಕಾಂಗ್ರೆಸ್‌ನ ಬಿ. ನಾಗೇಂದ್ರ ವಿರುದ್ಧ ಸೋತರು. ಕ್ಷೇತ್ರ ಬದಲಾವಣೆ ಮಾಡಿ ಚಿತ್ರದುರ್ಗದಿಂದ ಬಳ್ಳಾರಿಗೆ ಬಂದಿದ್ದ ಶ್ರೀರಾಮುಲುಗೆ ಮುಖಭಂಗವಾಗಿದೆ.

ಬಿ. ಶ್ರೀರಾಮುಲು 2018ರ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಕಣಕ್ಕಿಳಿದಿದ್ದರು. ಬಾದಾಮಿಯಲ್ಲಿ ಸೋತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಜಯಗಳಿಸಿದ್ದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿದ್ದರು.
ಕಾಂಗ್ರೆಸ್‌ನ ಬಿ. ನಾಗೇಂದ್ರ 84479 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿ. ಶ್ರೀರಾಮುಲು 59478 ಮತಗಳನ್ನು ಪಡೆದು ಹೀನಾಯವಾಗಿ ಸೋತಿದ್ದಾರೆ. ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋದ ಬಳಿಕ ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡಿದ್ದ ಶ್ರೀ ರಾಮುಲು ಚುನಾವಣೆಯಲ್ಲಿ ಸೋತಿದ್ದಾರೆ.
ಜನಾರ್ದನ ರೆಡಿ ಗರಡಿ; ಅಚ್ಚರಿ ಎಂದರೆ ಬಿ. ನಾಗೇಂದ್ರ ಮತ್ತು ಬಿ. ಶ್ರೀರಾಮುಲು ಮಾಜಿ ಸಚಿವ ಜನಾರ್ದನ ರೆಡ್ಡಿ ಗಡಿಯಲ್ಲಿ ಪಳಗಿದವರು. ಆದರೆ ಇಬ್ಬರು ಬೇರೆ-ಬೇರೆ ಪಕ್ಷಗಳಲ್ಲಿ ಇದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ಶ್ರಮಿಸಿದವರು.
ಬಿ. ನಾಗೇಂದ್ರ ಕೂಡ್ಲಗಿ ಕ್ಷೇತ್ರದವರು. 2018ರಲ್ಲಿ ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಬಂದರು. ಬಿ. ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋದರು. ಹಾಲಿ ಶಾಸಕ ನಾಗೇಂದ್ರ ಉತ್ತಮವಾಗಿ ಕೆಲಸ ಮಾಡಿದ್ದು ಅವರ ಗೆಲುವಿಗೆ ನೆರವಾಗಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರ ಆಂಧ್ರ ಪ್ರದೇಶದ ಜೊತೆ ಗಡಿಯನ್ನು ಹಂಚಿಕೊಂಡಿದೆ. ಪಕ್ಕದ ಜಿಲ್ಲೆಯಲ್ಲಿ ನಾಗೇಂದ್ರ ಸಹೋದರ ಸಚಿವರು. ಈ ಪ್ರಭಾವ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಜನಾರ್ದನ ರೆಡ್ಡಿ ಬಳಿಕ ಬಳ್ಳಾರಿಯಲ್ಲಿ ಪ್ರಭಾವ ಹೊಂದಿರುವ ಕುಟುಂಬ ಸೂರ್ಯನಾರಾಯಣ ರೆಡ್ಡಿ ಅವರದ್ದು. ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ ಮತ್ತು ಕಂಪ್ಲಿ ಕ್ಷೇತ್ರದಲ್ಲಿ ಅವರ ಪ್ರಭಾವ ಕೆಲಸ ಮಾಡುತ್ತದೆ. ಬಳ್ಳಾರಿ ನಗರದಲ್ಲಿ ನಾರಾ ಭರತ್ ರೆಡ್ಡಿಗೆ ಟಿಕೆಟ್ ಸಿಕ್ಕಿದೆ. ಇದು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸಹ ಕೆಲಸ ಮಾಡಿದೆ.












Click it and Unblock the Notifications