ಬಳ್ಳಾರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಮಾರಾಮಾರಿ: ಕಾರ್ಯಕರ್ತನ ತಲೆಗೆ ಕಲ್ಲೇಟು
ಬಳ್ಳಾರಿ, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮತದಾನ ನಡೆಯುತ್ತಿದ್ದು, ಇಂದು ಕೂಡ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಜಟಾಪಟಿ ಮುಂದುವರಿದಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿ ಜಗಳವಾಡಿಕೊಂಡ ಘಟನೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ. ಬಳ್ಳಾರಿಯ ಸಂಜೀವರಾಯನಕೋಟೆ ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಸ್ಥಳೀಯ ಮುಖಂಡ ಗಂಭೀರ ಗಾಯಗೊಂಡಿದ್ದಾರೆ.

ಮತದಾನಕ್ಕೆ ತೆರಳುವ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದ್ದು, ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಇತ್ತಿಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಉಮೇಶ್ ಗೌಡ ತಲೆಗೆ ಕಲ್ಲೇಟು ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಉಮೇಶ್ ಗೌಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೊಲೀಸರು ದೌಡಾಯಿಸಿದ್ದಾರೆ.
ಶೇಕಡಾವಾರು ಮತದಾನದ ವಿವರ
ಇನ್ನು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬೆಳಗ್ಗೆ 9 ಗಂಟೆಯವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಸರಾಸರಿ ಶೇಕಡಾ 8.554ರಷ್ಟು ಮತದಾನವಾಗಿದೆ.
ಬೆಳಗ್ಗೆ 9 ಗಂಟೆಯವರೆಗೆ ಶೇಕಡಾವಾರು ಮತದಾನದ ವಿವರ
ಕಂಪ್ಲಿ ವಿಧಾನಸಭಾ ಕ್ಷೇತ್ರ- 11.54% ಮತದಾನವಾಗಿದೆ.
ಸಿರಗುಪ್ಪ ವಿಧಾನಸಭಾ ಕ್ಷೇತ್ರ- 9.53% ಮತದಾನವಾಗಿದೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ- 8.54% ಮತದಾನವಾಗಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ- 7.26% ಮತದಾನವಾಗಿದೆ.
ಸಂಡೂರು ವಿಧಾನಸಭಾ ಕ್ಷೇತ್ರ-5.90% ಮತದಾನವಾಗಿದೆ.












Click it and Unblock the Notifications