ವಿಧಾನಸಭೆ ಚುನಾವಣೆ; ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ ಏನು?
ಬಳ್ಳಾರಿ, ಮಾರ್ಚ್ 28; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದೆ. ನ್ಯಾಯ ಸಮ್ಮತವಾದ ಚುನಾವಣೆ ನಡೆಸಲು ಅನುಕೂಲವಾಗುವಂತೆ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಆಭರಣ ಅಂಗಡಿಗಳ ಮಾಲೀಕರ ಜೊತೆ ಸಭೆಯನ್ನು ನಡೆಸಲಾಗುತ್ತಿದೆ. ಚುನಾವಣಾ ಸಮಯದಲ್ಲಿ ಅವರಿಗೂ ಜಿಲ್ಲಾಡಳಿತ ಕೆಲವು ನಿರ್ದೇಶನಗಳನ್ನು ನೀಡುತ್ತಿದೆ.
ಬಳ್ಳಾರಿಯ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರದ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಆಭರಣ ಅಂಗಡಿಗಳ ಮಾಲೀಕರೊಂದಿಗೆ ಸಭೆಯನ್ನು ನಡೆಸಿದರು. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಹಿನ್ನಲೆಯಲ್ಲಿ ಮಾಲೀಕರಿಗೆ ಹಲವು ಸೂಚನೆಗಳನ್ನು ನೀಡಿದರು.

ವಿಧಾನಸಭೆ ಚುನಾವಣೆಯ ವೇಳೆ ಮತದಾರರನ್ನು ಸೆಳೆಯಲು ಆಭರಣ, ಇತರೆ ಉಡುಗೊರೆ ನೀಡುತ್ತಿದ್ದಲ್ಲಿ ಮತ್ತು ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಪೆಟ್ರೋಲ್ ಬಂಕ್ ಹಾಗೂ ಆಭರಣ ಅಂಗಡಿ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮೊಹಮ್ಮದ್ ಝುಬೇರಾ ತಿಳಿಸಿದರು.
ಚುನಾವಣೆ ಪ್ರಚಾರ ಕಾರ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಅನಧಿಕೃತವಾಗಿ ಬಳಸದಂತೆ ನೋಡಿಕೊಳ್ಳಬೇಕು. ಪೆಟ್ರೋಲ್ ಬಂಕ್ ಮಾಲೀಕರು ಅತಿ ಹೆಚ್ಚು ಇಂಧನ ಆಮದು ಮಾಡಿಕೊಳ್ಳುವಂತಿಲ್ಲ. ಒಂದು ವೇಳೆ ಮಾಡಿಕೊಂಡಲ್ಲಿ ಹಿಂದಿನ ಮೂರು ತಿಂಗಳ ಸರಬರಾಜು ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆಯನ್ನು ನೀಡಲಾಯಿತು.
ಆಕರ್ಷಕ ಆಭರಣಗಳನ್ನು (ನಾಣ್ಯದ ರೂಪದ) ಮತ್ತು ಉಡುಗೊರೆಗಳ ಮೂಲಕ ಮತದಾರರನ್ನು ಸೆಳೆಯಲು ಬಳಸಿಕೊಳ್ಳಲಾಗುತ್ತಿದೆ. ಆಭರಣ ಅಂಗಡಿಗಳ ಮಾಲೀಕರು ಇದಕ್ಕೆ ಯಾವುದೇ ರೀತಿಯ ಅಸ್ಪದ ನೀಡಬಾರದು. ಒಂದೇ ಸಮಯದಲ್ಲಿ ಅತಿ ಹೆಚ್ಚು ಆಭರಣಗಳನ್ನು ಖರೀದಿಸಿದರೆ ಅಂತಹವರ ಮಾಹಿತಿಯನ್ನು ಅಂಗಡಿಗಳ ಮಾಲೀಕರು ದಾಖಲಿಸಿಕೊಳ್ಳಬೇಕು. ದಾಖಲೆಗಳಿಲ್ಲದ ಆಭರಣ ಮತ್ತು ಇತರೆ ಉಡುಗೊರೆಗಳನ್ನು ಸಂಚಾರದ ಸಮಯದಲ್ಲಿ ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತದ ಸಿದ್ಧತೆ; ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಿದ ಬಳಿಕ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಏಪ್ರಿಪ್ ಮೊದಲ ವಾರದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ವಿಧಾನಸಭಾ ಚುನಾವಣೆಯನ್ನು ಕಟ್ಟು ನಿಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಬಳ್ಳಾರಿ ಜಿಲ್ಲಾಡಳಿತವು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಬಳ್ಳಾರಿ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಕಾರಣ ಅಕ್ರಮ ತಡೆಯಲು ಒಟ್ಟು 18 ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಣೆ ಮಾಡುವ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಅಂತರರಾಜ್ಯ 11, ಅಂತರ್ ಜಿಲ್ಲೆ 5, ಜಿಲ್ಲಾ ವ್ಯಾಪ್ತಿಯಲ್ಲಿ 2 ಚೆಕ್‍ಪೋಸ್ಟ್ ತೆರೆದು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ವಾಹನಗಳ ತಪಾಸಣೆ ಮತ್ತು ಸಂಶಯಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ದಾಖಲೆ ಇಲ್ಲದ ಸಾಗಣೆ ಮಾಡುವ ಹಣ, ವಸ್ತುಗಳು, ಚಿನ್ನ, ಬೆಳ್ಳಿಯ ಆಭರಣಗಳನ್ನು ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗುತ್ತದೆ. ಮದ್ಯ ಸರಬರಾಜಿನ ಮೇಲೆ ಸಹ ಹೆಚ್ಚಿನ ಗಮನಹರಿಸಲಾಗಿದೆ.
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನೆರೆಯ ಜಿಲ್ಲೆಗಳಾದ ವಿಜಯನಗರ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಮತ್ತು ಗಡಿಭಾಗದ ಆಂಧ್ರಪ್ರದೇಶ, ಅನಂತಪುರ ಹಾಗೂ ಕರ್ನೂಲು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕಾರ ನೀಡುವಂತೆ ಕೋರಲಾಗಿದೆ.












Click it and Unblock the Notifications