ಜನಾರ್ದನ ರೆಡ್ಡಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದರು- ಬ್ರಹ್ಮಣಿ ರಾಜೀವ್ ರೆಡ್ಡಿ
ಬಳ್ಳಾರಿ, ಜನವರಿ 12: ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಯೋಜನೆಗಳು ಪೂರ್ಣಗೊಳ್ಳಬೇಕಾದರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜಿ.ಜನಾರ್ದನ ರೆಡ್ಡಿ ಅವರು ಮತ್ತೆ ಬಳ್ಳಾರಿಗೆ ಬರಬೇಕೆಂದು ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ರಾಜೀವ್ ರೆಡ್ಡಿ ಹೇಳಿದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿಯವರ 56ನೇ ಜನ್ಮದಿನದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡ ಬೈಕ್ ರ್ಯಾಲಿ ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದ ಪ್ರಮುಖ ಪ್ರದೇಶಗಳಲ್ಲಿ ವೃತ್ತಗಳು ಮತ್ತು ರಸ್ತೆಗಳು ಅಭಿವೃದ್ಧಿಯಾಗಲು ಜನಾರ್ದನ ರೆಡ್ಡಿ ಅವರೇ ಕಾರಣ. ವಾಲ್ಮೀಕಿ ವೃತ್ತ, ಎಸ್‍ಎನ್ ಪೇಟೆ ಮೇಲ್ಸೇತುವೆ, ರೇಡಿಯೋ ಪಾರ್ಕ್ ಮೇಲ್ಸೇತುವೆ ಒಳಗೊಂಡಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದರು.

ತಂದೆಯ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿದ ಬ್ರಹ್ಮಣಿ ರಾಜೀವ್ ರೆಡ್ಡಿ
ಜನ್ಮ ಭೂಮಿಯ ಬಗ್ಗೆ ಅಪಾರ ಗೌರವ ಹೊಂದಿರುವ ಜನಾರ್ದನ ರೆಡ್ಡಿ ಅವರು, ಬಳ್ಳಾರಿಯಿಂದ ದೂರ ಇರುತ್ತೇನೆ ಎಂದು ನನ್ನ ಕುಟುಂಬ ಯಾವತ್ತು ಅಂದುಕೊಂಡಿರಲಿಲ್ಲ ಎಂದು ವಿಷಾದಿಸಿದ್ದಾರೆ. ಅವರು ಸಚಿವರಾಗಿದ್ದಾಗ 2008ರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕ್ರಿಕೆಟ್ ಸ್ಟೇಡಿಯಂ, ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆ ಹೀಗೆ ಹತ್ತಾರು ಯೋಜನೆಗಳನ್ನು ರೂಪಿಸಿದ್ದರು. ಅವು ಪೂರ್ಣಗೊಳ್ಳಲು ಮತ್ತೊಮ್ಮೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದರು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟು ಹಾಕಿರುವ ರೆಡ್ಡಿ ಅವರು ಕೆಲವೇ ದಿನಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ರೈತರು, ಹಮಾಲಿಗಳಿಗೆ ಪೂರಕವಾಗಿ ಜನ ಸಾಮಾನ್ಯರಿಗೂ ಅನುಕೂಲವಾಗುಂಥ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಈ ಹಿಂದೆ ಅವರು ಹಂಪಿ ಉತ್ಸವವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಆಚರಿಸಿದ್ದರಲ್ಲದೆ, ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದರು. ತಾವೆಲ್ಲರೂ ಪಕ್ಷಕ್ಕೆ ಮತ್ತು ರೆಡ್ಡಿ ಕುಟುಂಬದವರಿಗೆ ಆಶೀರ್ವಾದ ಮಾಡಿದರೆ ಆ ಕನಸು ನನಸು ಮಾಡುವುದರಲ್ಲಿ ಸಂದೇಹ ಇಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಜನಾರ್ದನ ರೆಡ್ಡಿ ಅವರನ್ನು ಜನರಿಂದ ದೂರ ಮಾಡಲು ಸಾಧ್ಯವಿಲ್ಲ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಾಲಿ ಲಕ್ಷ್ಮೀ ಅರುಣಾ ಮಾತನಾಡಿ, ಈ ರೀತಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಾನು ನಿಂತು ಮಾತನಾಡುತ್ತೇನೆ ಎಂದುಕೊಂಡಿರಲಿಲ್ಲ. ನನ್ನ ಪತಿ ಸಿಂಧನೂರಿನಲ್ಲಿ ನಾನು ಒಂಟಿಯಾಗಿದ್ದೇನೆ ಎನ್ನುವ ವಿಚಾರ ತಿಳಿದು ಬೇಸರವಾಯಿತು. ಹೀಗಾಗಿ ನಾವು ಅವರೊಂದಿಗೆ ನಿಂತಿದ್ದೇವೆ. ಕರ್ನಾಟಕದ 6 ಕೋಟಿ ಕನ್ನಡಿಗರು ನನ್ನ ಪತಿಯ ಹಿಂದೆ ಇದ್ದಾರೆ. ಜನಾರ್ದನರೆಡ್ಡಿ ಅವರು ಒಬ್ಬ ಸಾಮಾನ್ಯ ಪೊಲೀಸ್ ಕಾನ್‍ಸ್ಬೇಬಲ್ ಅವರ ಮಗನಾಗಿದ್ದು, ಕನಕದುರ್ಗಮ್ಮನ ಮೇಲಿನ ಅಪಾರ ಭಕ್ತಿಯಿಂದಾಗಿ ಬಳ್ಳಾರಿಯನ್ನು ತುಂಬಾ ಪೂಜನೀಯ ಭಾವನೆಯಿಂದ ನೋಡುತ್ತಿದ್ದಾರೆ. ಅವರು ಸಚಿವರಾಗಿದ್ದಾಗ ಮೊದಲು ಅಭಿವೃದ್ಧಿಪಡಿಸಿದ್ದೇ ಕನಕದುರ್ಗಮ್ಮನ ದೇಗುಲ. ಸೂರ್ಯ ಹುಟ್ಟುವುದನ್ನು ಹೇಗೆ ತಡೆಯಲಾಗುವುದಿಲ್ಲವೋ ಅದೇ ರೀತಿ ಜನಾರ್ದನ ರೆಡ್ಡಿ ಅವರನ್ನು ಜನರಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ಭರಸವೆ ವ್ಯಕ್ತಪಡಿಸಿದರು.

ಗುಡಿ, ದರ್ಗಾ, ಚರ್ಚ್‌ಗಳಲ್ಲಿ ವಿಶೇಷ ಪೂಜೆ
ಈ ಸಂದರ್ಭದಲ್ಲಿ ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಕಲ್ಯಾಣ ಶ್ರೀಗಳು ಸೇರಿದಂತೆ ವಿವಿಧ ಧರ್ಮದ ಧರ್ಮದ ಧಮಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಜನಾರ್ದನರೆಡ್ಡಿ ಅವರು ಅಪಾರ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೂ ಮುನ್ನ ನಗರದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ಕಾರ್ಯಕರ್ತರು ವಿಶೇಷ ಪೂಜೆ ಏರ್ಪಡಿಸಿದ್ದು, ಬಳಿಕ ಕೌಲ್ ಬಜಾರ್ ಪ್ರದೇಶದ ದಿವಾನ್ ಮಸ್ತಾನ್ ದರ್ಗಾ ಮತ್ತು ಇಂದಿರಾನಗರದ ಆರೋಗ್ಯ ಮೇರಿ ಮಾತೆ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಜನಾರ್ದನ ರೆಡ್ಡಿ ಅವರ ರಾಜಕೀಯ ಜೀವನ, ಪಕ್ಷದ ಬಲವರ್ಧನೆಗೆ ಕೋರಿ ಜೈಕಾರ ಹಾಕಿದರು.












Click it and Unblock the Notifications