ಜಿಂದಾಲ್ ಕಾರ್ಖಾನೆಯನ್ನು ಮತ್ತೆ ಲಾಕ್ಡೌನ್ ಮಾಡಲ್ಲ: ಬಳ್ಳಾರಿ ಡಿಸಿ
ಬಳ್ಳಾರಿ, ಜೂನ್ 22: ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಮತ್ತೆ ಲಾಕ್ಡೌನ್ ಮಾಡಲು ಆಗುವುದಿಲ್ಲವೆಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದ್ದಾರೆ.
Recommended Video
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಜುಬಿಲಿಯಂಟ್ ಕಾರ್ಖಾನೆ ಸಣ್ಣ ಪ್ರಮಾಣದ ಉತ್ಪಾದನೆ ಹೊಂದಿದೆ. ಇದಲ್ಲದೆ, ಅದು ಕೇವಲ ಒಂದು ಸಾವಿರ ನೌಕರರನ್ನು ಮಾತ್ರ ಹೊಂದಿದೆ. ಹೀಗಾಗಿ ಕಾರ್ಖಾನೆಯನ್ನು ಲಾಕ್ಡೌನ್ ಮಾಡಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತರಲಾಯಿತು ಎಂದರು.
ಆದರೆ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನು ಹೊಂದಿದೆ. ಮೇಲಾಗಿ ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಲಾಕ್ಡೌನ್ ಮಾಡಲು ಬರುವುದಿಲ್ಲ ಎಂದು ಹೇಳಿದರು.

ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಈಗ ದೊಡ್ಡ ಕಂಟೈನ್ಮೆಂಟ್ ವಲಯ ಆಗಿ ಘೋಷಿಸಲಾಗಿದೆ. ಹೊರಗಿನಿಂದ ನೌಕರರನ್ನು ಕರೆ ತರುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ ಎಂದರು.

ಅನೇಕ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂದಾಜು 898 ಜನರನ್ನು ಈಗಾಗಲೇ ಜೆ.ಎಸ್.ಡಬ್ಲ್ಯು ಗುರುತಿಸಿ, ಅವರಿಗೆ ವೇತನ ಸಹಿತ ರಜೆ ನೀಡಿ ಮನೆಗೆ ಕಳಿಸಿಕೊಟ್ಟಿದೆ. ಜೊತೆಗೆ ಸುಮಾರು 1,086 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 246 ಮಂದಿಗೆ ಪಾಸಿಟಿವ್ ಬಂದಿದೆ. ಉಳಿದ 300 ಮಂದಿಯ ತಪಾಸಣೆ ವರದಿ ಇಂದು ಅಥವಾ ನಾಳೆ ಬರಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮಾಹಿತಿ ನೀಡಿದರು.












Click it and Unblock the Notifications