International Yoga day 2023: ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ, ಜನಪ್ರತಿನಿಧಿಗಳ ಗೈರು
ಬಳ್ಳಾರಿ, ಜೂನ್ 21: ಬಳ್ಳಾರಿ ನಗರದ ಶೆಟ್ಟರ್ ಗುರು ಶಾಂತಪ್ಪ ಪದವಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಮೇಯರ್ ಡಿ ತ್ರಿವೇಣಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಳ್ಳಾರಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ 06 ಜನ ಹಿರಿಯ ಯೋಗ ಸಾಧಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ.ವಿಜೇಂದ್ರ ಆಚಾರ್ಯ ಮಾತನಾಡಿ, ಅಸಂಕ್ರಾಮಿಕ ರೋಗಗಳು ತಡೆಗಟ್ಟುವಲ್ಲಿ ಯೋಗ ಪರಿಣಾಮಕಾರಿ. ಮಾನಸಿಕ ಮತ್ತು ದೇಹದ ಸಮತೋಲನಕ್ಕೆ ಯೋಗವೇ ಮದ್ದು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗಾಸಕ್ತರಿಗೆ ನೀರಿನ ಬಾಟಲ್, ಯೋಗ ಕೈಪಿಡಿ, ಟೀ-ಶರ್ಟ್ ಹಾಗೂ ಕ್ಯಾಪ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯಉಪ ಮೇಯರ್ ಜಾನಕಿ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತುಲ್ಲಾ, ವಿವಿ ಸಂಘದ ಅಧ್ಯಕ್ಷರಾದ ರಾಮನಗೌಡ, ಆಯುಷ್ ವೈದ್ಯಾಧಿಕಾರಿಗಳಾದ ಡಾ.ರಾಜೇಶ್ವರಿ, ಕಲ್ಯಾಣಿ, ಸುಜಾತ, ಡಾ.ಉಮೇಶ್, ಎನ್.ಸಿ.ಸಿ ಸತೀಶ್ ಸೇರಿದಂತೆ ಅವರು ಸೇರಿದಂತೆ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು, ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ವಿವಿಧ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಆದರೆ ಜಿಲ್ಲೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಜಿಲ್ಲಾ ಶಾಸಕ, ಸಚಿವರು ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.












Click it and Unblock the Notifications