ಬಳ್ಳಾರಿ: ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ
ಬಳ್ಳಾರಿ, ಜೂನ್, 26: ಬಳ್ಳಾರಿಯಲ್ಲಿ ಇಂದು (ಜೂನ್ 26) ಶ್ರೀ ಮೈತ್ರಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸುಪ್ರಜ ಸೌತ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಳ್ಳಾರಿಯಲ್ಲಿ ಶ್ರೀ ಮೈತ್ರಿ ಅಸೋಶಿಯೇಷನ್‌ನ ಪ್ರಾದೇಶಿಕ ಯೋಜನಾ ನಿರ್ದೇಶಕರಾದ ಸಿ.ಎಚ್.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಮಾಡಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನಸು ಗ್ರಾಮೀಣ ಮತ್ತು ನಗರ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಸಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಬಹುತೇಕ ಯುವಜನತೆ ಜೂಜು ಮತ್ತು ಮಾದಕ ವಸ್ತುಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಅವರು ತಮ್ಮ ಅಮೂಲ್ಯವಾದ ಜೀವನವನ್ನು ಮದ್ಯ ವ್ಯಸನ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುವುದರಿಂದ, ದಿನೇ ದಿನೇ ಆರೋಗ್ಯವನ್ನು ಕುಗ್ಗಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್.ಜಿ.ಆರ್.ಸಿ.ಎಂ ಕಾಲೇಜ್ ಪ್ರಧ್ಯಾಪಕರಾದ ಬಸವರಾಜ್ ಮಾತನಾಡಿ, ಇಂದಿನ ಬಹುತೇಕ ಯುವಕರು ಮದ್ಯಪಾನದ ದಾಸರಾಗಿದ್ದಾರೆ. ಅಲ್ಲದೆ, ಈ ಚಟಕ್ಕೆ ಬಿದ್ದು ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡು ತಮ್ಮ ಕುಟುಂಬದವರನ್ನು ಅನಾಥರನ್ನಾಗಿ ಮಾಡಿರುವ ಉದಾಹರಣೆಗಳು ಇವೆ. ಆದ್ದರಿಂದ ಯುವಜನತೆ ಎಚ್ಚೆತ್ತುಕೊಂಡು ಮಾದಕ ವಸ್ತುಗಳಿಂದ ದೂರವಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಜೀವನವನ್ನು ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಸಿ.ಎಚ್.ಕುಮಾರಸ್ವಾಮಿ ಮಾತನಾಡಿ ಮಧ್ಯಪಾನದಿಂದ ಸಮಾಜ ಮತ್ತು ಕುಟುಂಬದ ಮೇಲಾಗುವ ದುಷ್ಟಪರಿಣಾಮಗಳ ಕುರಿತು ತಿಳಿಸಿದರು. ಬಳಿಕ ಶ್ರೀ ಶರತ್ ಆರೋಗ್ಯ ನಿರೀಕ್ಷಣಾಧಿಕಾರಿ ಅವರು ಮಾತನಾಡಿ ತಂಬಾಕು ಪದಾರ್ಥಗಳಿಂದ ಯುವಪೀಳಿಗೆ ಹಾಳಾಗುತ್ತಿದೆ. ಆದ್ದರಿಂದ ಕುಟುಂಬದವರು ತಮ್ಮ ಮಕ್ಕಳ ಮೇಲೆ ಒಂದು ಕಣ್ಣಿಟ್ಟು ಇಂತಹ ದುಶ್ಚಟಗಳಿಂದ ತಪ್ಪಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಎಂ.ಬಿ., ತಿಪ್ಪೇಸ್ವಾಮಿ, ವೀರೇಶ್, ನಾಗರಾಜ್, ಜಿ.ಲಕ್ಷ್ಯ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications