ಹಂಪಿ ಗೈಡ್ ಪ್ರೀತಿಗೆ ಮನಸೋತ ಬೆಲ್ಜಿಯಂ ಯುವತಿ: ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ಮದುವೆ
ವಿಜಯನಗರ, ನವೆಂಬರ್ 25: ಪ್ರೀತಿಗೆ ಯಾವುದೇ ಮಿತಿ ಇಲ್ಲ. ವಯಸ್ಸಿನ, ಜಾತಿಯ, ಧರ್ಮದ, ದೇಶದ ಮಿತಿ ಇಲ್ಲದೇ ಪ್ರೀತಿ ಆರಂಭವಾಗುತ್ತದೆ. ಮಿತಿಗಳನ್ನು ದಾಟಿದ ಪ್ರೀತಿ ಕೆಲವು ಮದುವೆಯಾಗಿ ಯಾಶಸ್ವಿಯಾಗುತ್ತದೆ. ಇಂತಹ ಗಡಿ ಮೀರಿದ ಪ್ರೀತಿಗೆ ವಿಜಯನಗರದ ಜೋಡಿ ಸಾಕ್ಷಿಯಾಗಿದ್ದಾರೆ.
ವಿಜಯನಗರ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಶುಕ್ರವಾರ ಅದ್ಧೂರಿ ವಿವಾಹವೊಂದು ನಡೆದಿದ್ದು, ಹಲವು ವಿಶೇಷತೆಗೆ ಸಾಕ್ಷಿಯಾಗಿದೆ.
ಬೆಲ್ಜಿಯಂ ಯುವತಿ ಕೆಮಿಲ್ ಭಾರತದ ಅದರಲ್ಲೂ ಕರ್ನಾಟಕದ ವಿಜಯನಗರದ ಯುವಕನ ಜೊತೆ ಹಸೆಮಣೆ ಏರಿದ್ದು, ಇಬ್ಬರೂ ಪೋಷಕರ ಸಮ್ಮುಖದಲ್ಲಿ ಭಾರತೀಯ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

ಹಂಪೆಯಲ್ಲಿ ಆಟೋ ಚಾಲಕನಾಗಿ ಹಾಗೂ ಗೈಡ್ ಆಗಿ ಕೆಲಸ ಮಾಡುತ್ತಿದ್ದ ಅನಂತರಾಜು ಹಾಗೂ ಬೆಲ್ಜಿಯಂನಲ್ಲಿ ಸಮಾಜ ಸೇವಕಿಯಾಗಿದ್ದ ಕೆಮಿಲ್ ಮೊದಲ ಬಾರಿಗೆ ಹಂಪಿಯಲ್ಲಿ ಭೇಟಿಯಾಗಿದ್ದರು. ಕುಟುಂಬದ ಜೊತೆ ಹಂಪಿಗೆ ಬಂದಿದ್ದ ಕೆಮಿಲ್‌ಗೆ, ಅನಂತರಾಜು ಹಂಪಿ ವೀಕ್ಷಣೆಗೆ ಸಹಾಯ ಮಾಡಿದ್ದರು. ಈ ವೇಳೆ ಅನಂತರಾಜು ಅವರ ಪ್ರಾಮಾಣಿಕತೆಗೆ ಕೆಮಿಲ್ ಕುಟುಂಬದವರು ಮನಸೋತಿದ್ದರು. ಅನಂತರಾಜು ಹಾಗೂ ಕೆಮಿಲ್ ಪರಿಚಯ, ಸ್ನೇಹವಾಗಿತ್ತು. ಕೆಲ ದಿನಗಳ ಬಳಿಕ ಈ ಸ್ನೇಹ ಪ್ರೀತಿಯಾಗಿದ್ದು, ಅನಂತರಾಜು ಹಾಗೂ ಕೆಮಿಲ್ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಬೆಲ್ಜಿಯಂನ ಜೀಪ್ ಫಿಲಿಪ್ಪೆ ಅವರ ತೃತೀಯ ಪುತ್ರಿ ಆಗಿರುವ ಕೆಮಿಲ್ ಹಾಗೂ ಅನಂತರಾಜು ಮೂರು ವರ್ಷಗಳ ಹಿಂದೆಯೇ ಪ್ರೇಮ ವಿವಾಹ ಆಗಬೇಕಿತ್ತು. ಆದರೆ ಕೊರೊನಾದಿಂದ ಇವರ ಮದುವೆ ಮೂಂದೂಡಲಾಗಿತ್ತು.ಮಗಳ ಮದುವೆಯನ್ನು ಬೆಲ್ಜಿಯಂನಲ್ಲೇ ಅದ್ಧೂರಿಯಾಗಿ ಮಾಡಬೇಕು ಎಂದು ಕೆಮಿಲ್ ಪೋಷಕರು ಎಂದುಕೊಂಡಿದ್ದರು. ಆದರೆ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆಯಾಗಬೇಕು ಎಂದು ಅನಂತರಾಜು ಹಾಗೂ ಕುಟುಂಬಸ್ಥರು ಹೇಳಿದ್ದಾರೆ. ವರನ ಕಡೆಯವರು ಹೇಳಿರುವ ಮಾತಿಗೆ ಒಪ್ಪಿದ ಜೀಪ್ ಫಿಲಿಪ್ಪ ಮಗಳಿಗೆ ಹಂಪಿಯಲ್ಲೇ ಮದುವೆ ಮಾಡಿದ್ದಾರೆ.

ಗುರುವಾರ ಸಂಜೆ ಅನಂತರಾಜು ಹಾಗೂ ಕೆಮಿಲ್ ನಿಶ್ಚಿತಾರ್ಥ ನೆರವೇರಿದ್ದು, ಶುಕ್ರವಾರ ಬೆಳಗ್ಗೆ 8:30 ರಿಂದ 9:30ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಜೀಪ್ ಫಿಲಿಪ್ಪ ಅವರ ಕುಟುಂಬಸ್ಥರು ಹಾಗೂ ಅನಂತರಾಜು ಅವರ ತಾಯಿ ರೇಣುಕಮ್ಮ ಸೇರಿದಂತೆ ಕುಟುಂಬಸ್ಥರು ಹಾಗೂ ಹಂಪೆಯ ಜನ ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾರೆ. ಶುದ್ಧ ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದು, ಕೆಮಿಲ್ ರೇಷ್ಮೇ ಸೀರೆ ಉಟ್ಟು, ಕೈತುಂಬ ಬಳೆ ತೊಟ್ಟು, ತಲೆ ತುಂಬ ಹೂವು ಮುಡಿದು ಮಿಂಚಿದ್ದಾರೆ.












Click it and Unblock the Notifications