ಜನಾರ್ದನ್ ರೆಡ್ಡಿ ಹೊಸಪಕ್ಷ ಘೋಷಣೆ ಬಗ್ಗೆ ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಪ್ರತಿಕ್ರಿಯೆ
ಬಳ್ಳಾರಿ, ಡಿಸೆಂಬರ್, 25: ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ಪಕ್ಷಕ್ಕೆ ಹಿನ್ನೆಲೆ ಮತ್ತು ಸಿದ್ಧಾಂತ ಇದೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ. ಆದರೆ, ಜನಾರ್ಧನ್ ರೆಡ್ಡಿ ಹೊಸ ಪಕ್ಷ ಕಟ್ಟಿದ್ದಾರೆ. ಅವರ ಹಾದಿ ಅವರಿಗೆ, ನಮ್ಮ ಹಾದಿ ನಮಗೆ. ಆದರೆ ಅವರ ನಮ್ಮ ಸ್ನೇಹಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸಚಿವ ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದ್ದಾರೆ.
ಮಾಜಿ ಸಚಿವ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಎನ್ನುವ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ರೆಡ್ಡಿ ಬುದ್ಧಿವಂತರು, ತಿಳಿದವರು, ಅನುಭವ ಇದ್ದ ವ್ಯಕ್ತಿ ಇದ್ದಾರೆ. ರೆಡ್ಡಿ ಬಿಜೆಪಿ ಶಕ್ತಿಯಾಗಿದ್ದರು, ಪಕ್ಷವು ಅವರಿಗೆ ಶಕ್ತಿಯಾಗಿ ನಿಂತಿತ್ತು ಎಂದು ಅವರ ಪ್ರಾಣ ಸ್ನೇಹಿತನಾಗಿ ಹೇಳುತ್ತಿದ್ದೇನೆ ಎಂದರು. ನನ್ನ ಬೆಳವಣಿಗೆಗೆ ಜನಾರ್ಧನ್ ರೆಡ್ಡಿ ಅವರು ತುಂಬಾ ಸಹಕಾರಿ ಆಗಿದ್ದಾರೆ ಎಂದರು.
ಸಮಯ ಬಂದಾಗ ಉತ್ತರ ಕೊಡುವೆ
ಹಾಗೆಯೇ ನಾನು ಅವರಿಗೆ ಬಂಡೆಯಾಗಿ ನಿಂತಿದ್ದೇನೆ. ನಾನುಂತೂ ಬಿಜೆಪಿಯಲ್ಲಿರುವ ಸಿಎಂ ಬಸವರಾಜ ಬೊಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುವೆ ಎಂದರು. ರೆಡ್ಡಿ ಅವರು ವೈಯಕ್ತಿಕವಾಗಿ ಪಕ್ಷವನ್ನು ಮಾಡಿದ್ದಾರೆ. ಬಿಜೆಪಿ ಅವರನ್ನು ಯಾವತ್ತು ಬಿಟ್ಟುಕೊಟ್ಟಿಲ್ಲ. ಅವರು ಕೂಡ ಪಕ್ಷವನ್ನು ಬಿಟ್ಟು ಕೊಟ್ಟಿಲ್ಲ. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದೇನೆ. ಆದ್ದರಿಂದ ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.

ವೈಯಕ್ತಿಕವಾಗಿ ಸಂಪರ್ಕದಲ್ಲಿ ಇಲ್ಲ
ಇನ್ನು ಮಾಜಿ ಸಚಿವ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರೆಡ್ಡಿ ಅವರು ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕರ ಜೊತೆ ಮಾತನಾಡುತ್ತೇವೆ. ಕೆಜೆಪಿ ರೀತಿಯಲ್ಲಿ ಪರಿಣಾಮ ಬೀರಬಹುದೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ನಮ್ಮ ಜೊತೆ ರೆಡ್ಡಿ ಮತ್ತು ಯಾರೂ ಮಾತನಾಡಿಲ್ಲ. ಇತ್ತೀಚೆಗೆ ರೆಡ್ಡಿ ಅವರು ನನ್ನ ಜೊತೆ ವೈಯಕ್ತಿಕವಾಗಿ ಸಂಪರ್ಕದಲ್ಲಿ ಇಲ್ಲ ಎಂದರು.

ಮತದಾರ ಪ್ರಭುಗಳ ನಿರ್ಣಯವೇ ಅಂತಿಮ
ಇನ್ನು ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವದಲ್ಲಿ ಪಕ್ಷ ಕಟ್ಟಲು ಹಾಗೂ ಚುನಾವಣೆ ಸ್ಪರ್ಧಿಸಲು ಎರಡಕ್ಕೂ ಅವಕಾಶ ಇದೆ. ಇದರಲ್ಲಿ ಮತದಾರರೇ ಪ್ರಭುಗಳಾಗಿದ್ದಾರೆ. ಮತದಾರ ಪ್ರಭುಗಳು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆಯೋ ಎನ್ನುವುದನ್ನು ಕಾದು ನೋಡೋಣ. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಅನ್ನುವುದರ ಮೇಲೆ ಎಲ್ಲಾ ನಿರ್ಣಯವಾಗುತ್ತದೆ. ಕೆಲವನ್ನ ಇಂದೇ ಜಡ್ಜ್‌ಮೆಂಟ್ ಕೊಡಲು ಬರುವುದಿಲ್ಲ. ಕೆಲವನ್ನು ಕಾಲವೇ ನಿರ್ಣಯ ಮಾಡುತ್ತದೆ. ಆದ್ದರಿಂದ ನಾವು ಕಾಲವನ್ನು ಕಾದು ನೋಡಬೇಕಾಗುತ್ತದೆ. ನಾನು ವೈಯುಕ್ತಿಕ ವಿಷಯದಲ್ಲಿ ಅವರನ್ನು ಇದುವರೆಗೂ ಭೇಟಿಯಾಗಿಲ್ಲ. ನಮ್ಮ ನಡುವೆ ಸಂಬಂಧ ಕೆಟ್ಟಿದೆ ಅಂತಾನೂ ನಾನು ಹೇಳುವುದಿಲ್ಲ ಎಂದರು.












Click it and Unblock the Notifications