ಯುವತಿ ಜೊತೆ ಸ್ನೇಹ: ಯುವಕನಿಗೆ ಹಿಗ್ಗಾಮುಗ್ಗಾ ಥಳಿತದ ವಿಡಿಯೋ ವೈರಲ್!
ಬಳ್ಳಾರಿ, ಡಿಸೆಂಬರ್ 13: ಯುವತಿಯ ಜೊತೆ ಸ್ನೇಹ ಮಾಡಿದ್ದ ಯುವಕನಿಗೆ ಧರ್ಮದೇಟು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಣಿ ನಗರಿ ಬಳ್ಳಾರಿಯಲ್ಲಿ ಆ ವಿಡಿಯೊ ತುಣುಕುಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಇದೀಗ ಭಾರೀ ಸದ್ದು ಮಾಡುತ್ತಿವೆ.
ಒಂದು ಧರ್ಮದ ಯುವತಿಯ ಕಡೆಯವರು ಅದೇ ಧರ್ಮದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆಗೆ ಹಳೆಯದಾದ ಕಬ್ಬಿಣದ ಚೇರ್ ಹಾಗೂ ಕಲ್ಲನ್ನು ಬಳಕೆ ಮಾಡಿಕೊಂಡಿದ್ದಾರೆ. ಆ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಮನಕಲಕುವಂತಿವೆ.
ಘಟನೆಗೆ ಕಾರಣ:
ಬಳ್ಳಾರಿ ನಗರದ ಕೌಲ್ ಬಜಾರ್ ನ ಯುವಕ ಫಜಲ್ ಹಾಗೂ ಯುವತಿ ಅಬಿದಾ ಗಾಡ ಸ್ನೇಹಿತರಾಗಿದ್ದರು. ಈ ಹಿಂದೆ ಅಬಿದಾ ಮನೆ ಕಡೆಯವರು ಅವರಿಬ್ಬರಿಗೂ ಮಾತನಾಡದಂತೆ ವಾರ್ನಿಂಗ್ ಮಾಡಿದ್ದರು.

ಇಷ್ಟಾದರೂ ಸ್ನೇಹ ಮುದುವರೆಸಿದ್ದರಿಂದ, ಯುವತಿ ಅಬಿದಾ ಮನೆ ಕಡೆಯವರಿಂದ ನಡು ರಸ್ತೆಯಲ್ಲೇ ಯುವಕ ಫಜಲ್ ಹಾಗೂ ಕುಟುಬಸ್ಥರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ಯುವತಿ ಅಬಿದಾ ತಂದೆ ಆರೀಫ್ ಮತ್ತು ಚಿಕ್ಕಪ್ಪ ಇದಾಯತ್ ಸೇರಿ ಎಂಟು ಮಂದಿಯ ಗುಂಪೊಂದು ಫಜಲ್ ಹಾಗೂ ಆತನ ತಂದೆ ವಲಿಬಾಷಾ ಹಾಗೂ ಚಿಕ್ಕಪ್ಪ ನಿಸಾರ್ ಅಹಮದ್ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮ ಗಂಭೀರ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಇದಾಯತ್ ಸರ್ಕಾರಿ ನೌಕರರಾಗಿದ್ದಾರೆ. ಇದಾಯತ್ ಸೇರಿ ಎಂಟು ಮಂದಿಯ ವಿರುದ್ದ ಎಫ್ಐಆರ್ ದಾಖಲಾಗಿದೆ. ಈ ಘಟನೆ ನಡೆದು ಐದು ದಿನ ಕಳೆದರೂ ಕೂಡ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ ಎಂಬ ಆರೋಪವೂ ಕೂಡ ಕೇಳಿಬಂದಿದೆ.












Click it and Unblock the Notifications