ದಡಾರ-ರೂಬೆಲ್ಲಾ ಬಗ್ಗೆ ಅಲೆಮಾರಿ ಸಮುದಾಯದಲ್ಲಿ ಜಾಗೃತಿಗೆ ಆರೋಗ್ಯ ಇಲಾಖೆ ಪ್ರಯತ್ನ
ಬಳ್ಳಾರಿ, ಮೇ. 18: ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳನ್ನು ತಡೆಯಲು ದಡಾರ ರೂಬೆಲ್ಲಾ ಒಳಗೊಂಡಂತೆ 12 ಮಾರಕ ರೋಗಗಳ ವಿರುದ್ಧ ತಪ್ಪದೇ ಲಸಿಕೆಗಳನ್ನು ಹಾಕಿಸಬೇಕು. ಇದಕ್ಕೆ ಪಾಲಕರು ಕೈಜೊಡಿಸಬೇಕು ಎಂದು ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೇಗುಫ್ತಾ ಷಾಹೀನ್ ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಅಲೆಮಾರಿ ಜನತೆ ಹೆಚ್ಚಿರುವ ಪದ್ಮಾವತೆಮ್ಮ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿದೆ. ಈ ವೇಳೆ ದಡಾರವು ಸಾಂಕ್ರಾಮಿಕ ಮತ್ತು ಮರಣಾಂತಿಕ ಖಾಯಿಲೆಯೂ ಆಗಿದ್ದು, ಮಕ್ಕಳಲ್ಲಿ ಅಂಗವಿಕತೆ ಅಥವಾ ಸಾವನ್ನು ಸಹ ತರಬಹುದು ಎಂದು ಎಲ್ಲರಿಗೂ ಮಾಹಿತಿ ನೀಡಿದ್ದಾರೆ.

ದಡಾರಾ ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರ ನಿಮ್ಮ ಮಗುವನ್ನು ನ್ಯುಮೋನಿಯಾ, ಅತಿಸಾರ, ಮೆದುಳಿನ ಸೋಂಕಿನಂತ ಪ್ರಣಾಂತಿಕ ಕಾಯಿಲೆಗಳಿಗೆ ತುತ್ತು ಮಾಡಬಹುದು. ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ಇವರು ದಡಾರದ ಮುಖ್ಯ ಲಕ್ಷಣಗಳಾಗಿವೆ ಎಂದು ಅಲೆಮಾರಿ ಸಮುದಾಯದ ಜನರಿಗೆ ತಿಳಿ ಹೇಳಿದ್ದಾರೆ.
ಗರ್ಭಿಣಿ ಸ್ತ್ರೀಯರಲ್ಲಿ ರೂಬೆಲ್ಲಾ ಮಕ್ಕಳಿಗೂ ಬರುವ ಸಾಧ್ಯತೆ
ಗರ್ಭಿಣಿ ಸ್ತ್ರೀಯರಲ್ಲಿ ರೂಬೆಲ್ಲಾ ರೋಗವು ಮಕ್ಕಳಲ್ಲಿ ಬರುವ ಸಾಧ್ಯತೆ ಇದ್ದು, ಮೊದಲ ತ್ರೈಮಾಸಿಕ ಗರ್ಭಾವಸ್ಥೆಯಲ್ಲಿ ಮಗುವಿಗೆ ವಿಪರೀತ ಅಥವಾ ಮರಣಾಂತಿಕ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದಾಗಿದೆ. ಯಾವುದೇ ಮುಂಜಾಗ್ರತೆ ವಹಿಸದ ತಾಯಂದಿರಲ್ಲಿ ಕಂಡುಬರುವ ರೂಬೆಲ್ಲಾ ವೈರಸ್, ಮಗುವಿಗೆ ಗ್ಲುಕೋಮಾ, ಕಿವುಡುತನ, ಕಣ್ಣಿನಪೊರೆ, ಮೆದುಳು (ಮಾನಸಿಕತೆ ಅಸ್ವಸ್ಥತೆ ಅಥವಾ ಬುದ್ಧಿಮಾಂದ್ಯತೆ) ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಗರ್ಭಪಾತ ಅಥವಾ ಮಗು ಗರ್ಭದಲ್ಲೇ ಜನನಕ್ಕೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ದಡಾರ ರೂಬೆಲ್ಲಾ ಲಸಿಕೆಯನ್ನು ಎರಡು ಬಾರಿ ಅಂದರೆ, ಮಗುವಿನ ಒಂಭತ್ತು ತಿಂಗಳು ವಯಸ್ಸು ತುಂಬಿದ ನಂತರ ಹಾಗೂ ಮಗುವಿನ ಒಂದೂವರೆ ವರ್ಷದಲ್ಲಿ ಹಾಕಿಸಬೇಕು. ಈ ಮೂಲಕ ರೋಗ ತಡೆಯಲು ಸಹಕರಿಸಬೇಕು ಎಂದು ವೈದ್ಯಾಧಿಕಾರಿ ಡಾ. ಶೇಗುಫ್ತಾ ಷಾಹೀನ್ ಸಮುದಾಯದಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಮಾತನಾಡಿ, "ಮುಂಗಾರು ಮಳೆಯ ಆರಂಭಿಕ ಹಂತವಾಗಿರುವುದರಿಂದ ಅಲ್ಲಲ್ಲಿ ನೀರು ನಿಂತುಕೊಳ್ಳುವುದು ತಪ್ಪಿಸಬೇಕು. ಸೊಳ್ಳೆಗಳ ಉತ್ಪತ್ತಿಯಿಂದ ಡೆಂಗ್ಯೂ ರೋಗ ಹರಡುವ ಸಾಧ್ಯತೆಯಿದ್ದು, ಮನೆ ಸುತ್ತಲೂ ಸ್ವಚ್ಛತೆ ಕಾಪಾಡಬೇಕು" ಎಂದು ತಿಳಿಸಿದ್ದಾರೆ.
ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಬೇಕು. ಈ ಮೂಲಕ ಕ್ಷಯರೋಗ ಪತ್ತೆಗೆ ಸಹಕರಿಸಬೇಕು. ಒಂದು ವೇಳೆ ರೋಗ ಖಚಿತ ಪಟ್ಟಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕು. ಸಮುದಾಯದಲ್ಲಿ ಯಾರಿಗಾದರೂ ಮೈ ಮೇಲೆ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ಕುಷ್ಠರೋಗ ಖಚಿತಪಟ್ಟಲ್ಲಿ ಮಚ್ಚೆಗಳ ಆಧಾರದ ಮೇಲೆ ಆರು ತಿಂಗಳಿನಿಂದ ಒಂದು ವರ್ಷ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದ್ದಾರೆ. ಉಚಿತ ಆರೋಗ್ಯ ಶಿಬಿರದಲ್ಲಿ 100 ಹೆಚ್ಚು ಜನರಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆ ಪರೀಕ್ಷೆ, ಗರ್ಭಿಣಿಯರ ತಪಾಸಣೆ ಹಾಗೂ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು.












Click it and Unblock the Notifications