ಬಳ್ಳಾರಿಯಲ್ಲಿ ಮಾಜಿ ಸಂಸದ ಕೋಳೂರು ಬಸವನಗೌಡ ನಿಧನ
ಬಳ್ಳಾರಿ, ನವೆಂಬರ್, 26: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಂಸದ ಕೋಳೂರು ಬಸವನಗೌಡ (88) ಶುಕ್ರವಾರ ನಿಧನರಾಗಿದ್ದಾರೆ. ಮಾಜಿ ಸಂಸದ ಬಸವನಗೌಡ ಅವರು ಬಳ್ಳಾರಿಯ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ವಯೋ ಸಹಜ ಕಾಯಿಲೆ ಹಿನ್ನೆಲೆ ಶುಕ್ರವಾರ ನಿಧನರಾಗಿದ್ದಾರೆ.
ಶನಿವಾರ (ನವೆಂಬರ್ 26) ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಬಸವನಗೌಡ ಅವರ ಅಂತ್ಯಕ್ರಿಯೆ ನಡೆಯಲಿದೆ. 13ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದ ಕೋಳೂರು ಬಸವನಗೌಡ, ಸೋನಿಯಾಗಾಂಧಿ ರಾಜೀನಾಮೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ 2000ನೇ ಇಸವಿಯಲ್ಲಿ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆ ಆಗಿದ್ದರು.
ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾಗಿದ್ದ ಬಸವನಗೌಡ, ವೀರಶೈವ ಸಂಘದ ಹಿರಿಯ ನಾಯಕರಾಗಿದ್ದರು. ಅವರು ಇದೀಗ ಕುಟುಂಬ, ಬಂಧು ಬಳಗ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಹಾಗೆಯೇ ಬಳ್ಳಾರಿ ಜಿಲ್ಲೆಯ ಶಾಸಕರು, ಸಚಿವರು, ಮಾಜಿ ಶಾಸಕರು ಸಚಿವರು ಗಣ್ಯರು ಸಂತಾಪ ಸಲ್ಲಿಸಿದ್ದಾರೆ.

ಬಸವನಗೌಡರ ರಾಜಕೀಯದ ಹಾದಿ
ಅವರು ವೀರಶೈವ ಸಂಘದಲ್ಲಿ ಗುಮಾಸ್ತರಾಗಿ ಸೇವೆಗೆ ಸೇರಿದ್ದು, ನಂತರ ಸಂಘದ ಎಲ್ಲರ ಸಹಕಾರದಿಂದ ಬೆಳೆದಿದ್ದರು. ಶಿಕ್ಷಣ ಇಲಾಖೆಯಲ್ಲಿ ಆಗಬೇಕಾದ ಸಂಘದ ಕಾರ್ಯಗಳನ್ನೆಲ್ಲ ಸೂಕ್ಷವಾಗಿ ಬಗೆಹರಿಸಿಕೊಂಡು ಬರುವ ಚಾಣಾಕ್ಷತನವನ್ನು ಹೊಂದಿದ್ದರು. ಅಲ್ಲದೇ ಎಲ್ಲಾ ಪಕ್ಷದ ಮುಖಂಡರೊಂದಿಗೆ, ಸಮಾಜದ ಎಲ್ಲಾ ಮುಖಂಡರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದವರಾಗಿರು.
ವೀರಶೈವ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿತ್ತು. ಉಪಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ ನಡೆದಾಗ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಅವರು ಬಸನಗೌಡರನ್ನು ಸೂಚಿಸಿ ಟಿಕೆಟ್ ಪಡೆದಿದ್ದರು. ರಾಜ್ಯಸಭಾ ಸದಸ್ಯರಾಗಿದ್ದ ಕೊಂಡಯ್ಯ ಅವರು ಇವರ ಜೊತೆಗೆ ಉತ್ತಮ ಬಾಂಧವ್ಯದಿಂದ ಇದ್ದರು ಎನ್ನಲಾಗಿದೆ.
ಬಸವನಗೌಡರ ನಿಧನಕ್ಕೆ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ, ಕಾರ್ಯದರ್ಶಿ ಬಿ.ವಿ.ಬಸವರಾಜ್, ಖಜಾಂಚಿ ಗೋನಾಳ್ ರಾಜಶೇಖರಗೌಡ, ಸಹ ಕಾರ್ಯದರ್ಶಿ ದರೂರು ಶಾಂತನಗೌಡರು ತೀವ್ರ ಸಂತಾಪ ಸೂಚಿಸಿದ್ದಾರೆ.












Click it and Unblock the Notifications