ಗಣಿಗಾರಿಕೆ ಪ್ರದೇಶದ ಪುನಶ್ಚೇತನ, ಅರಣ್ಯ ಸಚಿವರ ಮಹತ್ವದ ಸೂಚನೆ
ಬಳ್ಳಾರಿ, ಡಿಸೆಂಬರ್ 22: ಬಹಳ ಹಿಂದೆಯೇ ಸುಪ್ರೀಂಕೋರ್ಟ್ ಗಣಿಗಾರಿಕೆ ಪ್ರದೇಶದಲ್ಲಿ ಪುನರ್ ವಸತಿ, ಪುನಶ್ಚೇತನ ಕೆಲಸ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗಣಿಬಾಧಿತ ಪ್ರದೇಶದಲ್ಲಿ ತಾಲೂಕಿಗೊಂದು ವೃಕ್ಷೋದ್ಯಾನ ನಿರ್ಮಾಣ ಮಾಡಲು ಅರಣ್ಯ ಸಚಿವರು ಸೂಚನೆ ನೀಡಿದ್ದಾರೆ. ಈ ಕುರಿತು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬಳ್ಳಾರಿಯ ಅರಣ್ಯ ಇಲಾಖೆ ಕಛೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕರ್ನಾಟಕ ಗಣಿ ಪರಿಸರ ಪುನರ್ ಸ್ಥಾಪನೆ ನಿಗಮ (ಕೆ.ಎಂ.ಇ.ಆರ್.ಸಿ) ನಿಧಿ ಬಳಸಿಕೊಂಡು ಜೀವಿ ಪರಿಸ್ಥಿತಿಯ ಮೇಲಾಗಿರುವ ಹಾನಿ ತಗ್ಗಿಸಲು ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

"ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರದ ಮೇಲಿನ ದುಷ್ಪರಿಣಾಮ ತಗ್ಗಿಸಲು ತಾಲೂಕಿಗೊಂದು ವೃಕ್ಷೋದ್ಯಾನ ನಿರ್ಮಿಸಲು ಕಾರ್ಯ ಯೋಜನೆ ರೂಪಿಸುವಂತೆ" ಸಚಿವರು ಹೇಳಿದರು.
ಗಣಿ ಪ್ರದೇಶದ ಪುನಶ್ಚೇತನ: ಸಚಿವರು ಮಾತನಾಡಿ, "ಗಣಿ ಪ್ರದೇಶಗಳಲ್ಲಿ ವನ್ಯಜೀವಿ ಸಂರಕ್ಷಣೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ವನ್ಯ ಜೀವಿಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಬಾರದಂತೆ ನೀರುಗುಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು" ಎಂದು ತಿಳಿಸಿದರು.
ಬಳ್ಳಾರಿ ವೃತ್ತದಲ್ಲಿ ಎಷ್ಟು ಸಿ ಪ್ರವರ್ಗದ ಗಣಿಗಳಿವೆ, ಗಣಿ ಕಂಪನಿಗಳಿಗೆ ಪರಿಹಾರಾತ್ಮಕ ಅರಣ್ಯ ಬೆಳೆಸಲು ಎಷ್ಟು ಡಿಗ್ರೇಡೆಡ್ ಅರಣ್ಯ ಭೂಮಿ ನೀಡಲಾಗಿದೆ, ಎಷ್ಟು ಭೂಮಿಯಲ್ಲಿ ಪರಿಹಾರಾತ್ಮಕ ಅರಣ್ಯ ಬೆಳೆಸಲಾಗಿದೆ. ಅರಣ್ಯದಂಚಿನಲ್ಲಿ ಶ್ರೀಗಂಧ, ಬೀಟೆ, ತೇಗ ಮೊದಲಾದ ಬೆಲೆಬಾಳುವ ಮರಗಳ ಜಿಯೋ ಟ್ಯಾಗ್ ಮಾಡಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ದಾವಣಗೆರೆ, ಕೊಪ್ಪಳ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ವಿಭಾಗದಲ್ಲಿ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸಲು ಮತ್ತು ರೈತರ ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ವಿತರಿಸಲು ನರ್ಸರಿಗಳಲ್ಲಿ ಸಸಿ ಬೆಳೆಸಲು ಹೆಚ್ಚಿನ ಮುತುವರ್ಜಿ ವಹಿಸುವಂತೆ ಸೂಚಿಸಿದರು.
ಅರಣ್ಯ ಒತ್ತುವರಿ ಬಗ್ಗೆ ನಿಗಾ: ಸಚಿವ ಈಶ್ವರ ಖಂಡ್ರೆ, "ಗುತ್ತಿಗೆ ನೀಡಿರುವ ಪ್ರದೇಶಕ್ಕಿಂತ ಹೆಚ್ಚುವರಿಯಾಗಿ ಗಣಿಗಾರಿಕೆಗೆ ಅರಣ್ಯ ಪ್ರದೇಶ ಒತ್ತುವರಿಯಾಗುತ್ತಿರುವ ಬಗ್ಗೆ ದೂರುಗಳಿದ್ದು, ಉಪಗ್ರಹ ಚಿತ್ರ ಮತ್ತು ಕೆ.ಎಂ.ಎಲ್. ನಕ್ಷೆ ಆಧರಿಸಿ ಅರಣ್ಯ ಸಂರಕ್ಷಿಸುವಂತೆ" ಸೂಚನೆ ನೀಡಿದರು.
ಕಲ್ಲಿದ್ದಲು ಸೇರಿದಂತೆ ವಿವಿಧ ಗಣಿಗಾರಿಕೆಯಿಂದ ಹಾನಿಯಾದ ಗಣಿಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅರಣ್ಯೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒತ್ತು ನೀಡುತ್ತಿವೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಾನಿಯಾದ ಪ್ರದೇಶದಲ್ಲಿ 2022-23ನೇ ಸಾಲಿನ ಹಣಕಾಸು ವರ್ಷದವರೆಗೆ ಸುಮಾರು 180.30 ಲಕ್ಷ ಸಸಿಗಳನ್ನು ನೆಡುವ ಮೂಲಕ ಸುಮಾರು 8,090 ಹೆಕ್ಟೇರ್ ಭೂಮಿಯನ್ನು ಹಸಿರುಗೊಳಿಸಲಾಗಿದೆ.
ಕಲ್ಲಿದ್ದಲು ನಿಕ್ಷೇಪ ಖಾಲಿಯಾದ ಬಳಿಕ ಪರಿಸರ ಗಣಿಗಾರಿಕೆ ಪ್ರದೇಶದಲ್ಲಿ ಉದ್ಯಾನವನಗಳು, ಜಲ ಕ್ರೀಡೆಗಳ ತಾಣಗಳು, ಗಾಲ್ಫ್ ಮೈದಾನಗಳು, ಮನರಂಜನೆ, ಸಾಹಸ, ಪಕ್ಷಿ ವೀಕ್ಷಣೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅವಕಾಶವಿದೆ.
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಭೂಸುಧಾರಣೆ ನಿರಂತರ ಪ್ರಕ್ರಿಯೆಯಾಗಿದೆ. ಕಲ್ಲಿದ್ದಲನ್ನು ಹೊರತೆಗೆದ ನಂತರದ ಅನುಮೋದಿತ ಗಣಿ ಮುಚ್ಚುವಿಕೆ ಯೋಜನೆ/ ಪರಿಸರ ಅನುಮತಿ ಷರತ್ತುಗಳ ಪ್ರಕಾರ ಪುನರುಜ್ಜೀವನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಗಣಿಗಾರಿಕೆ ಕಾರ್ಯಾಚರಣೆಗಳ ಸಂದರ್ಭದಲ್ಲಿ, ಗಣಿಗಾರಿಕೆಯ ಪ್ರತಿಕೂಲ ಪರಿಣಾಮಗಳನ್ನು ಸಾಧ್ಯವಾದಷ್ಟು ಬೇಗ ತಗ್ಗಿಸುವ ನಿಟ್ಟಿನಲ್ಲಿ ಗಣಿಗಾರಿಕೆ ಕಂಪನಿಗಳು ಗಣಿಗಾರಿಕೆ ಜೊತೆ ಜೊತೆಗೇ ಹಂತವಾಗಿ ಗಣಿ ಮುಚ್ಚುವ ಚಟುವಟಿಕೆಗಳನ್ನು ನಡೆಸುತ್ತವೆ.












Click it and Unblock the Notifications