ಬಳ್ಳಾರಿ : ಸಚಿವರ ಪ್ರತಿಷ್ಠೆಗೆ ಅಧಿಕಾರಿ ಅಮಾನತು?
ಬಳ್ಳಾರಿ, ಜೂ. 18 : ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ವಿರುದ್ಧ ಕೆಡಿಪಿ ಸಭೆಯಲ್ಲಿ ವಾಗ್ಯುದ್ಧ ಮಾಡಿದ್ದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮಂಗಳವಾರ ಮಂಟೇಸ್ವಾಮಿ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಅಧಿಕಾರಿಗಳ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಮಂಟೇಸ್ವಾಮಿ ಅವರ ವಿರುದ್ಧ ಸಚಿವರು ಕರ್ತವ್ಯಲೋಪದ ಆರೋಪ ಮಾಡಿದ್ದರು. ಆದರೆ, ಮಂಟೇಸ್ವಾಮಿ ಅವರು ಸಚಿವರಿಗೆ ಎದುರೇಟು ನೀಡಿ ಕರ್ತವ್ಯ ಪಾಲನೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದ್ದರು.
ಸಭೆಯಲ್ಲಿಯೇ ಮಂಟೇಸ್ವಾಮಿ ಪ್ರತ್ಯುತ್ತರ ನೀಡಿದ್ದರಿಂದ ಸಚಿವರು ದ್ವೇಷ ಸಾಧಿಸುವ ಸಲುವಾಗಿ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಕೆಲವು ಅಧಿಕಾರಿಗಳು ಆರೋಪಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತಂದ ಸಚಿವರು, ಮಂಟೇಸ್ವಾಮಿ ಅವರನ್ನು ಅಮಾನತುಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಟೇಸ್ವಾಮಿ ಅವರನ್ನು ಕರ್ತವ್ಯ ಲೋಪ ಹಾಗು ದುರ್ನಡತೆಗಾಗಿ ಕೆಸಿಎಸ್ (ಸಿಸಿಎ) ನಿಯಮಾವಳಿಗಳು 1957ರ ನಿಯಮ 10(1) (ಡಿ) ಅನ್ವಯ ಅಮಾನತು ಮಾಡಿ ಇಲಾಖೆಯ ಉಪಕಾರ್ಯದರ್ಶಿ ಸುರೇಶ್ ಬಿ. ಕೃಷ್ಣಪ್ಪನವರ್ ಆದೇಶ ಹೊರಡಿಸಿದ್ದಾರೆ.












Click it and Unblock the Notifications