KSRTC: ಸೋಮವಾರ ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ
ಬಳ್ಳಾರಿ, ಅಕ್ಟೋಬರ್ 14: ದಸರಾ ಮತ್ತು ಭಾನುವಾರದ ರಜೆ ಮುಗಿಸಿ ಇಂದು ಸಂಚಾರ ನಡೆಸುವ ಜನರಿಗೆ ಮಹತ್ವದ ಮಾಹಿತಿಯೊಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್‌ಗಳ ಸಂಚಾರದಲ್ಲಿ ಅಕ್ಟೋಬರ್ 14ರ ಸೋಮವಾರ ವ್ಯತ್ಯಯ ಉಂಟಾಗಲಿದೆ. ಹಲವು ಕಡೆ ದೈನಂದಿನ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯಾರ್ಥಿಗಳು, ಪ್ರಯಾಣಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 14ರಂದು ಸಂಡೂರು ಪಟ್ಟಣದಲ್ಲಿ ಆಯೋಜಿಸಿರುವ ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.

ಬಳ್ಳಾರಿ ವಿಭಾಗದಿಂದ ಒಟ್ಟು 200 ಬಸ್ಸುಗಳನ್ನು ಸಾಂಧರ್ಬಿಕ ಒಪ್ಪಂದದ ಮೇಲೆ ಈ ಕಾರ್ಯಕ್ರಮಕ್ಕೆ ಒದಗಿಸಲಾಗುತ್ತಿದೆ. ಆದ್ದರಿಂದ ಅಕ್ಟೋಬರ್ 14ರ ಸೋಮವಾರ ವಿವಿಧ ಕಡೆಗಳಲ್ಲಿ ದೈನಂದಿನ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿಯನ್ನು ನೀಡಲಾಗಿದೆ.
ಸೋಮವಾರ ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡತಿನಿ, ಕಂಪ್ಲಿ ಮತ್ತು ಸಂಡೂರು ಭಾಗಗಳಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್ಸುಗಳ ದೈನಂದಿನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಬೃಹತ್ ಸಮಾವೇಶ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಳ್ಳಾರಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು 10.50ಕ್ಕೆ ತೋರಣಗಲ್ಲಿನ ಜಿಂದಾಲ್ ಏರ್‌ಸ್ಟ್ರಿಪ್‌ಗೆ ಆಗಮಿಸಲಿದ್ದಾರೆ.
ಬೆಳಗ್ಗೆ 11.15ಕ್ಕೆ ಸಿದ್ದರಾಮಯ್ಯ ಸಂಡೂರಿಗೆ ಆಗಮಿಸಲಿದ್ದು, ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಇವರ ವತಿಯಿಂದ ಸಂಡೂರು ಪಟ್ಟಣದ ಅಗ್ನಿಶಾಮಕದಳ ಮುಂಭಾಗದ ವಿಶ್ವಾಸ್ ಯು.ಲಾಡ್ ಮೈದಾನದ ಆವರಣದಲ್ಲಿ ಆಯೋಜಿಸಿರುವ ಸಂಡೂರು ತಾಲ್ಲೂಕಿನ ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.55ಕ್ಕೆ ಸಿದ್ದರಾಮಯ್ಯ ತೋರಣಗಲ್ಲಿಗೆ ತೆರಳಿ, ಜಿಂದಾಲ್ ಏರ್‌ಸ್ಟ್ರಿಪ್‌ನಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, "ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಬಳ್ಳಾರಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ. ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವಿವಿಧ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ" ಎಂದರು.
ಬಳ್ಳಾರಿ ಜಿಲ್ಲಾಡಳಿತ ಸಮಾವೇಶಕ್ಕಾಗಿ ಅಗತ್ಯ ತಯಾರಿ ಮಾಡಿಕೊಂಡಿದೆ. ಸಚಿವರು, ಶಾಸಕರು ಸೇರಿದಂತೆ ಅಧಿಕಾರಿಗಳು, ಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.
ಸಮಾವೇಶ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರಲು ಒಟ್ಟು 700ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ನೋಡಿಕೊಳ್ಳಬೇಕು. ಯಾವುದೇ ಲೋಪ ಉಂಟಾಗದಂತೆ ಅಚ್ಚುಕಟ್ಟಾಗಿ ಸಮಾವೇಶ ನಿರ್ವಹಿಸಲು ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.












Click it and Unblock the Notifications