Tungabhadra Dam: ತುಂಗಭದ್ರಾ ಡ್ಯಾಂಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಳ್ಳಾರಿ, ಸೆಪ್ಟೆಂಬರ್ 22: ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಮುರಿದು ಹೋಗಿ ಅಪಾರ ಪ್ರಮಾಣದ ನೀರು ನದಿಯ ಪಾಲಾಗಿತ್ತು. ಕ್ರಸ್ಟ್‌ಗೇಟ್ ದುರಸ್ತಿ ಕಾರ್ಯಾಚರಣೆ ಯಶಸ್ವಿಯಾದ 25 ದಿನಗಳ ಬಳಿಕ ಮೂರು ರಾಜ್ಯಗಳ ಜೀವನಾಡಿಯಾದ ಡ್ಯಾಂ ಮತ್ತೆ ಭರ್ತಿಯಾಗಿದೆ. ತುಂಗಭದ್ರಾ ಒಡಲು ಮತ್ತೆ ತುಂಬಿದ್ದು, ರೈತರು ಸಂತಸಗೊಂಡಿದ್ದಾರೆ. ಮತ್ತೆ ಭರ್ತಿಯಾದ ಡ್ಯಾಂಗೆ ಬಾಗಿನ ಅರ್ಪಿಸಲಾಗಿದೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಚಿವರು ಹೊಸಪೇಟೆಯಲ್ಲಿರುವ ಡ್ಯಾಂಗೆ ಬಾಗಿನ ಅರ್ಪಿಸಿದರು, ವಿಶೇಷ ಪೂಜೆ ಸಲ್ಲಿಸಿದರು. 2ನೇ ಬಾರಿಗೆ ತುಂಗಭದ್ರಾ ಡ್ಯಾಂ ಪೂರ್ಣ ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಸಿಗುವ ನಿರೀಕ್ಷೆ ರೈತರಲ್ಲಿದೆ.

ಡ್ಯಾಂನ 19ನೇ ಕ್ರಸ್ಟ್‌ಗೇಟ್ ಚೈನ್ ಲಿಂಕ್ ದುರಸ್ತಿ ಕಾರ್ಯದ ವೇಳೆ ಡ್ಯಾಂಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಉತ್ತಮ ಮಳೆಯಾಗಿ ಡ್ಯಾಂ ಬೇಗ ಮತ್ತೆ ಭರ್ತಿಯಾಗಲಿ, ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಹೇಳಿದ್ದರು. ಮಲೆನಾಡು ಭಾಗದಲ್ಲಿ ಸುರಿದ ಮಳೆಯ ಕಾರಣ ಮತ್ತೆ ತುಂಗಭದ್ರಾ ಒಡಲು ಬೇಗ ತುಂಬಿದೆ.
25 ದಿನಗಳ ಬಳಿಕ ಡ್ಯಾಂ ಭರ್ತಿ: ಈ ಬಾರಿ ಉತ್ತಮ ಮಳೆಯಾದ ಕಾರಣ ಜುಲೈ ತಿಂಗಳ ಅಂತ್ಯದಲ್ಲಿಯೇ ತುಂಗಭದ್ರಾ ಡ್ಯಾಂ ಭರ್ತಿಯಾಗಿತ್ತು. ಆದರೆ ಆಗಸ್ಟ್ 10ರ ಶನಿವಾರ ರಾತ್ರಿ ಡ್ಯಾಂನ 19ನೇ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಮುರಿದು ಹೋಗಿತ್ತು. ನೀರಿನ ಒತ್ತಡದ ಕಾರಣ ಗೇಟ್ ಬದಿಗೆ ಸರಿದಿತ್ತು. ಈ ಒಂದೇ ಗೇಟ್‌ನಿಂದ ಸುಮಾರು 35 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿತ್ತು.
ಸುಮಾರು 7 ದಿನಗಳ ಕಾಲ ನಡೆಸಿದ ಕಾರ್ಯಾಚರಣೆ ಬಳಿಕ ಕಟ್ ಆಗಿ ಜಾರಿ ಹೋಗಿದ್ದ 19ನೇ ಕ್ರಸ್ಟ್‌ಗೇಟ್‌ಗೆ 5 ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡಿ ಗೇಟ್ ಮೂಲಕ ನದಿಗೆ ನೀರಿನ ಹೊರ ಹರಿವು ಸಂಪೂರ್ಣ ನಿಲ್ಲಿಸಲಾಗಿತ್ತು. ತುಂಗಭದ್ರಾ ಡ್ಯಾಂನ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಅಡಿಯಾಗಿದೆ. ಈ ಕಾರ್ಯಾಚರಣೆಯಿಂದ ಸುಮಾರು 30 ಟಿಎಂಸಿ ಅಡಿಗೂ ಹೆಚ್ಚು ನೀರು ಉಳಿತಾಯವಾಗಿದೆ ಎಂದು ವಿಜಯನಗರ ಜಿಲ್ಲಾಡಳಿತ ಹೇಳಿತ್ತು.
ಕಾರ್ಯಾಚರಣೆ ಕುರಿತು ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, "ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿ, ನಾಡಿನ ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದೇವೆ. ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು" ಎಂದು ಹೇಳಿದ್ದರು.
19ನೇ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯವನ್ನು ಕನ್ನಯ್ಯ ನಾಯ್ಡು ನಿವೃತ್ತ ಅಧಿಕಾರಿಗಳು, ತುಂಗಭದ್ರಾ ಸ್ಟೀಲ್ ಪ್ಲಾಂಟ್ಸ್ ಹೊಸಪೇಟೆ ಇವರ ನಿರ್ದೇಶನದಲ್ಲಿ ನಡೆಸಲಾಗಿತ್ತು. ನೀರಿನ ಹೊರ ಹರಿವು ಸಂಪೂರ್ಣವಾಗಿ ಬಂದ್ ಆದ ಬಳಿಕ, ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದರೆ ಮತ್ತೆ ಡ್ಯಾಂ ಭರ್ತಿಯಾಗಲಿದೆ ಎಂದು ಅಂದಾಜಿಸಲಾಗಿತ್ತು.
2023ನೇ ವರ್ಷದಲ್ಲಿ ಮಳೆ ಕೊರತೆಯಿಂದ ತುಂಗಭದ್ರಾ ಡ್ಯಾಂ ಭರ್ತಿಯಾಗಿರಲಿಲ್ಲ. ಆದ್ದರಿಂದ ರೈತರು ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೇ ಸಂಕಷ್ಟಪಟ್ಟಿದ್ದರು. ಡ್ಯಾಂ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಮೀಸಲಿಡಲಾಗಿತ್ತು. 2024ರಲ್ಲಿ ಡ್ಯಾಂ ಭರ್ತಿಯಾಗಿತ್ತು ಆದರೆ ಗೇಟ್ ಚೈನ್ ಲಿಂಕ್ ಮುರಿದು, 30 ಟಿಎಂಸಿ ಅಡಿಗೂ ಹೆಚ್ಚು ನೀರು ನದಿಗೆ ಹೋದ ಕಾರಣ ರೈತರು ನಿರಾಸೆಗೊಂಡಿದ್ದರು.
ಆದರೆ ಈಗ ಡ್ಯಾಂ ಮತ್ತೆ ಭರ್ತಿಯಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ತುಂಗಭದ್ರಾ ಡ್ಯಾಂ ನೀರು ಜೀವನಾಡಿಯಾಗಿದೆ. ರಾಯಚೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಈ ನೀರು ಅಗತ್ಯವಾಗಿದೆ. ಡ್ಯಾಂ ಮತ್ತೆ ಭರ್ತಿಯಾಗಿದ್ದು, ಈಗ ಸಂತಸ ತಂದಿದೆ.












Click it and Unblock the Notifications