ಬಳ್ಳಾರಿ: ಶಾಸಕರ ಕಛೇರಿಗೆ ಬಾಂಬ್ ಬೆದರಿಕೆ ಸಂದೇಶ
ಬಳ್ಳಾರಿ, ಮಾರ್ಚ್ 18: ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಕಛೇರಿಯಲ್ಲಿ ಬಾಂಬ್ ಇರುವುದಾಗಿ ಯುವಕನೊಬ್ಬ ಸಂದೇಶ ಕಳಿಸಿರುವ ಘಟನೆ ನಡೆದಿದೆ. ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಬೆಂಗಳೂರಿನಲ್ಲಿದ್ದು, ತಮ್ಮ ಮೊಬೈಲ್‌ಗೆ ಬಂದ ಸಂದೇಶದ ಕುರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಬಳ್ಳಾರಿ ನಗರದ ರೂಪನಗುಡಿ ರಸ್ತೆಯ ನಿವಾಸಿಯಾದ ಸಂತೋಷ್ ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಸಂತೋಷ್ ಸೋಮವಾರ ರಾತ್ರಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಗೆ ವಾಟ್ಸಪ್ ಸಂದೇಶ ಕಳಿಸಿದ್ದು, ನಿಮ್ಮ ಕಛೇರಿಯಲ್ಲಿ ಬಾಂಬ್ ಇರುವುದಾಗಿ ಹೇಳಿದ್ದ.

ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕರು ಈ ಬಗ್ಗೆ ಗಾಂಧಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಶಾಸಕರ ಕಛೇರಿಯಲ್ಲಿ ಹುಡುಕಾಟ ನಡೆಸಿದ್ದು, ಬಳಿಕ ಇದು ಹುಸಿ ಸಂದೇಶ ಎಂದು ಖಚಿತಪಡಿಸಿಕೊಂಡರು. ಸಂದೇಶ ಕಳಿಸಿದ ಯುವಕನಿಗಾಗಿ ಹುಡುಕಾಟ ಪ್ರಾರಂಭಿಸಿದರು.
ಕುಡಿದ ಮತ್ತಿನಲ್ಲಿ ಸಂದೇಶ: ಪೊಲೀಸರು ಸಂದೇಶ ಕಳಿಸಿದ ರೂಪನಗುಡಿ ರಸ್ತೆಯ ನಿವಾಸಿಯಾದ ಸಂತೋಷ್ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಕುಡಿದ ಮತ್ತಿನಲ್ಲಿ ಶಾಸಕರ ಕಛೇರಿಯಲ್ಲಿ ಬಾಂಬ್ ಇದೆ ಎಂದು ಸಂದೇಶ ಕಳಿಸಿರುವುದು ತಿಳಿದುಬಂದಿದೆ.
ಉನ್ನತ ವ್ಯಾಸಂಗ ಮಾಡಿದರೂ ಕೆಲಸ ಸಿಗದ ಕಾರಣ ಯುವಕ ಸಂತೋಷ್ ಕುಡಿತ ಕಲಿತಿದ್ದ. ಸೋಮವಾರ ರಾತ್ರಿ ಕುಡಿದ ಮತ್ತಿನಲ್ಲಿಯೇ ಶಾಸಕರ ವಾಟ್ಸಪ್ ನಂಬರ್‌ಗೆ ಬಾಂಬ್ ಇರುವುದಾಗಿ ಸಂದೇಶ ಕಳಿಸಿದ್ದ. ಪೊಲೀಸರ ಮುಂದೆಯೂ ಆತ ಇದನ್ನು ಒಪ್ಪಿಕೊಂಡಿದ್ದಾನೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಭರತ್ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 86440 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. ಎದುರಾಳಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿ ಪತ್ನಿ ಗಾಲಿ ಲಕ್ಷ್ಮಿ ಅರುಣ 48577 ಮತಗಳು, ಬಿಜೆಪಿಯ ಸೋಮಶೇಖರ ರೆಡ್ಡಿ 37155 ಮತಗಳನ್ನು ಪಡೆದು ಸೋಲು ಕಂಡಿದ್ದರು.
'ಬಾಂಬ್ ಇನ್ ಯುವರ್ ಆಫೀಸ್' ಎಂದು ಶಾಸಕ ಭರತ್ ರೆಡ್ಡಿಗೆ ವಾಟ್ಸಪ್ ಸಂದೇಶ ಕಳಿಸಿದ ಸಂತೋಷ್ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈತ ನಿವೃತ್ತ ಶಿಕ್ಷಕಿಯ ಪುತ್ರನಾಗಿದ್ದು, ಬಿಬಿಎ ವ್ಯಾಸಂಗ ಮಾಡಿದ್ದಾನೆ. ಆದರೆ ಯಾವುದೇ ಕೆಲಸ ಸಿಕ್ಕಿರಲಿಲ್ಲ.
ಶಾಸಕ ಭರತ್ ರೆಡ್ಡಿಯವರಿಗೆ ಸಂದೇಶ ಕಳಿಸಿರುವ ಸಂತೋಷ್ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೋಡಿ ಕಲಿಯಿರಿ. ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಿ ಅವರು ಯುವಕ/ ಯುವತಿಯರಿಗೆ ಉದ್ಯೋಗ ನೀಡುತ್ತಿದ್ದಾರೆ.
ಶಾಸಕರಾದ ನೀವು ಕೇವಲ ಬಳ್ಳಾರಿ ನಗರದಲ್ಲಿ ಫೆಕ್ಸ್ ಹಾಕಿಕೊಂಡು ಓಡಾಡುತ್ತಿದ್ದೀರಿ ಎಂದು ಆರೋಪಿಸಿದ್ದಾನೆ. ಅಲ್ಲದೇ ಸಂತೋಷ್ ನಾನು ನಿಮ್ಮ ಅಭಿಮಾನಿ ಎಂದು ಶಾಸಕ ಭರತ್ ರೆಡ್ಡಿ ಅವರಿಗೆ ಹೇಳಿದ್ದಾನೆ ಎಂಬ ಮಾಹಿತಿಯೂ ಇದೆ.
ಪೊಲೀಸರು ಯುವಕ ಸಂತೋಷ್ ವಿಚಾರಣೆಯನ್ನು ನಡೆಸುತ್ತಿದ್ದು, ಬಾಂಬ್ ಬೆದರಿಕೆ ಸಂದೇಶ ಏಕೆ ಕಳಿಸಿದ? ಎಂಬುದು ಇನ್ನೂ ತಿಳಿದುಬರಬೇಕಿದೆ.












Click it and Unblock the Notifications