'ಡಿಕೆಶಿ ಬಳಿ ಹಣ ಬಲ ಇರಬಹುದು, ಬಳ್ಳಾರಿಯಲ್ಲಿ ಗೆಲುವು ನಮ್ಮದು'
ಬಳ್ಳಾರಿ, ಅಕ್ಟೋಬರ್ 08 : 'ನಾಲ್ಕು ದಶಕದಿಂದ ಬಳ್ಳಾರಿ ಬಿಜೆಪಿಯ ಭದ್ರಕೋಟೆ. ಉಪ ಚುನಾವಣೆಗೆ 2 ದಿನದಲ್ಲಿ ಅಭ್ಯರ್ಥಿ ಅಂತಿಮಗೊಳ್ಳಲಿದೆ. ಈ ಚುನಾವಣೆ ಬಿಜೆಪಿ ಕಾಂಗ್ರೆಸ್ ನಡುವಿನ ಹೋರಾಟವಾಗಿದೆ' ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು.
ಬಳ್ಳಾರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಲೋಕಸಭೆ ಉಪ ಚುನಾವಣೆಗೆ 7 ರಿಂದ 8 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಎನ್.ವೈ.ಸುಜಯ್ ಅವರು ಸಹ ಸೇರಿದ್ದಾರೆ. ನಾವು ರಾಜ್ಯಾಧ್ಯಕ್ಷರಿಗೆ ಪಟ್ಟಿ ತಲುಪಿಸುತ್ತೇವೆ' ಎಂದರು.

'ಡಿ.ಕೆ.ಶಿವಕುಮಾರ್ ಅವರಿಗೆ ಎಷ್ಟೇ ಹಣ ಬಲ ಇರಬಹುದು. ಸರ್ಕಾರವೇ ಅವರ ಬಳಿ ಇರಬಹುದು. ಆದರೆ, ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ನಾನು ಪ್ರಚಾರ ನಡೆಸುತ್ತೇನೆ' ಎಂದರು.
'ಬಳ್ಳಾರಿಯಲ್ಲಿ ನಡೆಯುವ ಉಪ ಚುನಾವಣೆ ಡಿಕೆಶಿ ವರ್ಸಸ್ ರಾಮುಲು ಅಲ್ಲ. ಬಿಜೆಪಿ ವರ್ಸ್‌ಸ್ ಕಾಂಗ್ರೆಸ್ ನಡುವಿನ ಹೋರಾಟ. 2019ರ ಚುನಾವಣೆಯಲ್ಲಿಯೂ ಮೋದಿ ಅವರು ಮತ್ತೆ ಪ್ರಧಾನಿ ಆಗ್ತಾರೆ. ಬಳ್ಳಾರಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿ.ಶ್ರೀರಾಮುಲು ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಜಯಗಳಿಸಿ ಬಳ್ಳಾರಿಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಉಪ ಚುನಾವಣೆ ಎದುರಾಗಿದೆ. ನ.3ರಂದು ಚುನಾವಣೆ ನಡೆಯಲಿದ್ದು, ನ.6ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications