23 ವರ್ಷದ ಯುವತಿಗೆ ಬಳ್ಳಾರಿ ಮೇಯರ್ ಪಟ್ಟ: ಖುಷಿ ಹಂಚಿಕೊಂಡ ಡಿ.ತ್ರಿವೇಣಿ ಸೂರಿ
ಬಳ್ಳಾರಿ ಮಾರ್ಚ್ 29: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಬಳ್ಳಾರಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಡಿ.ತ್ರಿವೇಣಿ ಸೂರಿ ಮೇಯರ್ ಪಟ್ಟವನ್ನು ಅಲಂಕರಿಸಿದ್ದಾರೆ. ಇಡೀ ರಾಜ್ಯದಲ್ಲೇ ಕಿರಿಯ ವಯಸ್ಸಿನಲ್ಲಿ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ತ್ರಿವೇಣಿ ಖ್ಯಾತಿ ಅವರಿಗೆ ಸಲ್ಲುತ್ತದೆ.
ಬಳ್ಳಾರಿ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಡಿ.ತ್ರಿವೇಣಿ ಸೂರಿ ಮಾಧ್ಯಮಗಳೊಂದಿಗೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ಬಳ್ಳಾರಿ ಪಾಲಿಕೆಯ ಮೇಯರ್ ಆಗಿ ಆಯ್ಕೆ ಆಗಿರುವುದಕ್ಕೆ ತುಂಬಾ ಖುಷಿ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾರೂ ಮೇಯರ್, ಕಾರ್ಪೋರೇಟರ್ ಆಗಿಲ್ಲ. ಆದರೆ ನಾನಾಗಿದ್ದೇನೆ. ಹೀಗಾಗಿ ತುಂಬಾ ಖುಷಿ ಎನಿಸುತ್ತಿದೆ. ನನ್ನನ್ನು ಆಯ್ಕೆ ಮಾಡಿರುವ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಮಾತು ಮುಂದುವರಿಸಿದ ಅವರು, ಡಿ. ತ್ರಿವೇಣಿ ಸೂರಿ "ಈ ಒಂದು ಅವಕಾಶ ಸಿಗುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನನ್ನ ಅದೃಷ್ಟ, ನಾನು ತುಂಬಾ ಲಕ್ಕಿ. ನನ್ನ ತಂದೆ ಈ ಹಿಂದೆ ಪಾಲಿಕೆ ಮೇಯರ್ ಆಗಿದ್ದರು. ಅವರನ್ನು ನೋಡಿ ಸ್ಫೂರ್ತಿ ಪಡೆದು ನಾನು ಸ್ಪರ್ಧಿಸಿದ್ದೆ. ಎಲ್ಲಾ ವಾರ್ಡ್‌ಗಳ ಕಾರ್ಪೋರೇಟರ್‌ಗಳ ಸಹಾಯದಿಂದ ಪಾಲಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತೇನೆ" ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಡಿ.ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಜರಿದ್ದ 44 ಜನ ಮತದಾನದ ಹಕ್ಕು ಪಡೆದ ಸದಸ್ಯರು, ಸಂಸದರು, ಶಾಸಕರು ಮತದಾನದಲ್ಲಿ ಪಾಲ್ಗೊಂಡರು. ನಂತರ ತ್ರಿವೇಣಿಗೆ 28 ಮತ್ತು ನಾಗರತ್ನಗೆ ನಿರೀಕ್ಷೆಯಂತೆ 16 ಮತಗಳು ಬಂದವು. ಹೀಗಾಗಿ ಡಿ. ತ್ರಿವೇಣಿ ಸೂರಿ ಹೆಚ್ಚಿನ ಮತ ಪಡೆದ ಹಿನ್ನೆಲೆಯಲ್ಲಿ ಬಳ್ಳಾರಿಯ ನೂತನ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಡಿ. ತ್ರಿವೇಣಿ ಸೂರಿ ಬಳ್ಳಾರಿಯ ನೂತನ ಮೇಯರ್ ಆಗಿ ಆಯ್ಕೆಯಾದ ವಿಚಾರವನ್ನು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರುದ್ರೇಶ್, ಎಡಿಸಿ ಉಪಸ್ಥಿತರಿದ್ದರು.
ಹಾಲಿ ನೂತನ ಮೇಯರ್ ತ್ರಿವೇಣಿ ಅವರ ತಂದೆ ಈ ಹಿಂದೆ 2019ರಲ್ಲಿ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ತ್ರಿವೇಣಿಯವರು ಈಗಾಗಲೇ ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸ್ ಪೂರೈಸಿದ್ದಾರೆ. ನಾಲ್ಕನೇ ವಾರ್ಡ್‌ನ ಕಾಂಗ್ರೆಸ್ ಪಾಲಿಕೆ ಸದಸ್ಯೆ ಆಗಿರುವ ತ್ರಿವೇಣಿ. ಸದರಿ ಪಾಲಿಕೆಯ ಚುನಾವಣೆ ವೇಳೆ ಗೆದ್ದ ಕಿರಿಯ ವಯಸ್ಸಿನ ಸದಸ್ಯೆ ಆಗಿ ಆಯ್ಕೆ ಆಗಿದ್ದರು.












Click it and Unblock the Notifications