Ballari: ಮುಂಗಾರು ಪೂರ್ವ ಮಳೆಯ ಅಪಾಯಗಳನ್ನು ತಡೆಯಲು ಆರೋಗ್ಯ ಇಲಾಖೆ ಕಟ್ಟೆಚ್ಚರ
ಬಳ್ಳಾರಿ, ಮೇ 24: ಮುಂಗಾರು ಪೂರ್ವ ಮಳೆ ಆರಂಭದ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯ ಸುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯ ಬೇಕು ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ. ರಮೇಶ್‌ಬಾಬು ಸಾರ್ವಜನಿಕರಿಗೆ ತಿಳಿಸಿದರು.
ನೀರಿನ ಸಂಗ್ರಹಕಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಮತ್ತು ಚರಂಡಿಗಳಲ್ಲಿ ಕಸ-ಕಡ್ಡಿಗಳನ್ನು ಹಾಕದಂತೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಂಡಲ್ಲಿ ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಯಬಹುದು ಎಂದು ತಿಳಿಸಿದರು.

ಸಂಡೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕುಶಲೋಪರಿ ವಿಚಾರಿಸಿ ಮಾತನಾಡಿಸಿದ ಅವರು, ಮಳೆ ನೀರು ಮನೆಯ ಸುತ್ತಲು ಹಾಗೂ ಮನೆಯ ಮೇಲ್ಭಾಗದಲ್ಲಿ, ಹೂವಿನ ಕುಂಡಗಳಲ್ಲಿ, ಟಿನ್, ಪ್ಲಾಸ್ಟಿಕ್ ಕಪ್ ಮುಂತಾದವುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ನೀರು ಸಂಗ್ರಾಹಕಗಳಾದ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ, ಮಡಿಕೆ ಮುಂತಾದವುಗಳನ್ನು ನೀರು ತುಂಬಿಸುವ ಪೂರ್ವದಲ್ಲಿ ಚೆನ್ನಾಗಿ ತೊಳೆದು ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆ ನಿಯಂತ್ರಣವನ್ನು ಕೈಗೊಳ್ಳಬೇಕು ಎಂದರು.
ಮಾನ್ಸೂನ್ ಮಳೆಯ ಆರಂಭಿಕ ಹಿನ್ನಲೆಯಲ್ಲಿ ಮಳೆ, ಗುಡುಗು-ಮಿಂಚು ಸಹಿತ ಬರುವುದರಿಂದ ಬಯಲಿನಲ್ಲಿದ್ದರೆ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ತಗ್ಗು ಪ್ರದೇಶ ಇಲ್ಲದೇ ಬಯಲಿನಲ್ಲಿಯೇ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಬೇಕು, ಇದರಿಂದ ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ. ಮರಗಳಿದ್ದ ಪ್ರದೇಶದಲ್ಲಿ ಇದ್ದರೆ ಆದಷ್ಟು ಅಲ್ಲಿಂದ ಬೇಗನೆ ಹೊರಬರುವುದು ಉತ್ತಮ ಎಂದು ಸಿಡಿಲಿನ ಹೊಡೆತದಿಂದ ತಪ್ಪಿಸಿಕೊಳ್ಳುವ ಬಗ್ಗೆ ವಿವರಿಸಿದರು.
ಮಳೆಯ ಹಿನ್ನಲೆಯಲ್ಲಿ ನೀರಿನ ಮೂಲಗಳಿಗೆ ಹೊಸ ನೀರು ಬರುವುದರಿಂದ ಆಕಸ್ಮಿಕವಾಗಿ ಶುದ್ಧಿಕರಿಸದೇ ಇರುವ ನೀರನ್ನು ಕುಡಿಯಬಾರದು. ವಾಂತಿ ಬೇಧಿ ಉಂಟಾಗುವ ಸಾದ್ಯತೆಗಳು ಇರುತ್ತವೆ. ಕ್ಲೋರಿನೇಷನ್ ಕೈಗೊಂಡು ಶುದ್ಧಿಕರೀಸಿದ ಕುಡಿಯುವ ನೀರನ್ನು ಹಾಗೂ ಶುದ್ದೀಕರಣ ಘಟಕದ ನೀರನ್ನು ಕುಡಿಯಬೇಕು. ಸಾಧ್ಯವಿದ್ದಲ್ಲಿ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು. ಊಟದ ಪೂರ್ವ, ಶೌಚದ ನಂತರ ಕೈಗಳನ್ನು ಸಾಬೂನುನಿಂದ ತೊಳೆದುಕೊಳ್ಳಬೇಕು ಎಂದು ಡಿಹೆಚ್‍ಓ ಅವರು ತಿಳಿಸಿದರು.
ಒಂದು ವೇಳೆ ಅನಾರೋಗ್ಯಕ್ಕೀಡಾದರೆ, ಆಸ್ಪತ್ರೆಗಳಲ್ಲಿ ಈಗಾಗಲೇ ಎಲ್ಲಾ ಅಗತ್ಯ ಔಷಧಿಗಳ ದಾಸ್ತಾನು ಇರಿಸಲಾಗಿದ್ದು, ಯಾರು ಆತಂಕಕ್ಕೆ ಒಳಗಾಗದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು ಎಂದು ಜನರಲ್ಲಿ ವಿನಂತಿಸಿದರು.












Click it and Unblock the Notifications