ಬಳ್ಳಾರಿ: ರೈತರ ವಿಚಾರದಲ್ಲಿ ಬೆಂಕಿ ಬಿದ್ದ ಮೇಲೆ ಭಾವಿ ತೋಡುವ ಪ್ರಸಂಗ ಬೇಡ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಕಿವಿಮಾತು
ಬಳ್ಳಾರಿ ನವೆಂಬರ್ 21: ''ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. ಆದರೆ ಶೇ.33 ರಷ್ಟು ರೈತರ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ನಿಖರವಾಗಿ ನಮೂದಿಸಲಾಗಿಲ್ಲ. ಅಧಿಕಾರಿಗಳ ಇಂತಹ ನಡೆಯಿಂದ ರೈತರಿಗೆ ಅನ್ಯಾಯವಾಗಲಿದೆ" ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದ್ದಾರೆ.
ಬಳ್ಳಾರಿ ಜಿಲ್ಲಾಡಳಿತದ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, "ಬರ ಪರಿಹಾರದ ಹಣ ರೈತರಿಗೆ ಆನ್ಲೈನ್ ಮೂಲಕವೇ ತಲುಪಲಿದೆ. 'ಫ್ರೂಟ್ಸ್' ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲಿದೆ. ಆದರೆ ಬಳ್ಳಾರಿಯಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರು ಶೇ.33 ರಷ್ಟು ರೈತರ ಜಮೀನಿನ ಒಟ್ಟು ವಿಸ್ತೀರ್ಣದ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ಸಂಪೂರ್ಣವಾಗಿ ನಮೂದಿಸಲಾಗಿಲ್ಲ ಏಕೆ ? ಸರ್ಕಾರದ ಸೂಚನೆ ಪಾಲಿಸಲೂ ನಿಮಗೆ ಕಷ್ಟವೇ?" ಎಂದು ಅಧಿಕಾರಿಗಳ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.

"ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ.. ಎಷ್ಟು ಏಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೇ ಇರುತ್ತದೆ. ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಿ" ಎಂದು ಸೂಚಿಸಿದರು.
"ಅಧಿಕಾರಿಗಳು ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ನಮೂದಿಸದಿದ್ದರೆ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಮಳೆ ಇಲ್ಲದ ಕಾರಣ ರೈತರು ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಹೀಗಾಗಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಮುಂದಿನ ವಾರದ ಒಳಗಾಗಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ರೈತರ ಜಮೀನಿನ ನಿಖರ ಮಾಹಿತಿಯನ್ನು ನಮೂದಿಸಿ, ಇನ್ನಾದರೂ ಬೆಂಕಿ ಬಿದ್ದ ಮೇಲೆ ಭಾವಿ ತೋಡುವ ರೀತಿಯ ವರ್ತನೆ ನಿಲ್ಲಿಸಿ" ಎಂದರು.

ಪಹಣಿ ಜೊತೆಗೆ ಆಧಾರ್ ಲಿಂಕ್ ಮಾಡಲು ಕರೆ:
ರಾಜ್ಯದಲ್ಲಿ ಶೇ.70 ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ.
ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

25 ವರ್ಷಗಳಿಂದ ಬಾಕಿ ಉಳಿದ ಬಗರ್ ಹುಕುಂ ಅರ್ಜಿ:
ವಿಲೇವಾರಿಯಾಗದ ಬಗರ್ ಹುಕುಂ ಅರ್ಜಿಗಳ ಬಗ್ಗೆ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, "ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಬಳ್ಳಾರಿಯಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 53ರ ಅಡಿಯಲ್ಲೇ ಸುಮಾರು 25,000 ಅರ್ಜಿಗಳು ಬಾಕಿ ಇವೆ.
1998 ರಲ್ಲೇ ನಮೂನೆ 53 ರ ಅರ್ಜಿ ಕರೆಯಲಾಗಿತ್ತು. 25 ವರ್ಷ ಆದ್ರೂ ಈ ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ ಅಂದ್ರೆ ಏನರ್ಥ? ಎಂದು ಕಿಡಿಕಾರಿದ ಅವರು, ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಗಂಧ ಗಾಳಿಯೂ ಗೊತ್ತಿಲ್ಲ ಎಂಬುದು ಇದರಿಂದ ಖಚಿತವಾಗುತ್ತಿದೆ " ಎಂದು ಅಸಮಾಧಾನ ಹೊರಹಾಕಿದರು.
ನಮೂನೆ 57 ರ ಅರ್ಜಿಯೂ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದಿನ ಒಂದು ವರ್ಷದಲ್ಲಿ ಈ ಎಲ್ಲಾ ಅರ್ಜಿಗಳೂ ವಿಲೇವಾರಿ ಆಗಬೇಕು. ಪ್ರತಿ ವಾರದ ಪ್ರಗತಿಯು ಆ್ಯಪ್ ನಲ್ಲಿ ಅಪ್ಡೇಟ್ ಆಗಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಗಳಿಗೆ ನೋಟೀಸ್ ನೀಡಲಾಗುತ್ತದೆ" ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದರು.

"ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು. ಆದರೆ, ಬಗರ್ ಹುಕುಂ ಅಡಿಯಲ್ಲಿ ಗೋಮಾಳ ಜಮೀನನ್ನು ಮಂಜೂರು ಮಾಡಬಾರದು" ಎಂದು ಅವರು ತಾಕೀತು ಮಾಡಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆ್ಯಪ್:
ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.
ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ. ಶೀಘ್ರದಲ್ಲೇ ಈ ಆ್ಯಪ್ ಅಧಿಕಾರಿಗಳ ಕೈಸೇರಲಿದೆ. ಈ ಆ್ಯಪ್ ಸಹಾಯದೊಂದಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು.
ಅಲ್ಲದೆ, ಅರ್ಜಿ ವಿಲೇವಾರಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಇ-ಸಾಗುವಳಿ ಚೀಟಿಯನ್ನೂ ತಂತ್ರಾಂಶದ ಮೂಲಕವೇ ಒದಗಿಸಬಹುದು. ಮಂಜೂರಾದ ಪ್ರಕರಣಗಳಲ್ಲಿ ಕಾವೇರಿ 2.0 ಮೂಲಕ ನೋಂದಣಿ ಮಾಡಿಸಿಕೊಡಲು ಕ್ರಮವಹಿಸಲಾಗುವುದು. ಇದರಿಂದ ಜನರಿಗೂ ಅನುಕೂಲವಾಗಲಿದೆ. ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಭೂ ಮಂಜೂರಾತಿ ತಕರಾರು ಪ್ರಕರಣಗಳನ್ನು ತಡೆಯಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ-ತಹಶೀಲ್ದಾರ್ ತಬ್ಬಿಬ್ಬು!
ಬಳ್ಳಾರಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಮುನ್ನವೇ ಸಚಿವ ಕೃಷ್ಣ ಬೈರೇಗೌಡ ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಆದರೆ, ಸಚಿವರು ಕಚೇರಿಗೆ ಆಗಮಿಸುವ ವಿಚಾರ ತಿಳಿಯದ ಅಧಿಕಾರಿಗಳು ಎಂದಿನಂತೆ 10.45 ಆದರೂ ಕಚೇರಿಗೆ ಹಾಜರಾಗಿರಲಿಲ್ಲ. ಸ್ವತಃ ತಹಶೀಲ್ದಾರ್ ಸಹ ಕಚೇರಿಗೆ ಆಗಮಿಸಿರಲಿಲ್ಲ. ಹೀಗಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಜರಾತಿ ಪುಸ್ತಕ ಪರಿಶೀಲಿಸಿ ಎಲ್ಲಾ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು.
ಈ ವೇಳೆ ದಡಬಡಿಸಿ ಕಚೇರಿಗೆ ದೌಡಾಯಿಸಿದ ತಹಶೀಲ್ದಾರರನ್ನೂ ಸಹ ಸಚಿವರು ತರಾಟೆಗೆ ತೆಗೆದುಕೊಂಡರು. ಒಂದು ಸರ್ಕಾರಿ ಕಚೇರಿಯನ್ನು ನಡೆಸುವುದು ಹೀಗಾ? ಬಡವರ ಕೆಲಸ ಅಂದ್ರೆ ಏಕಿಷ್ಟು ತಾತ್ಸಾರ? ಎಂದು ಕಿಡಿಕಾರಿದರು. ಸಭೆಯಲ್ಲಿ ಕಂಪ್ಲಿ ಶಾಸಕರಾದ ಗಣೇಶ್, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಬಳ್ಳಾರಿ ಜಿಲ್ಲಾಧಿಕಾರಿಯಾದ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications