Ballari: ಜನಾರ್ಧನ ರೆಡ್ಡಿ Vs ಸೋಮಶೇಖರ್ ರೆಡ್ಡಿ : ಕ್ಷೇತ್ರಕ್ಕೆ ಕಾಲಿಡದೆ ಪತ್ನಿಯನ್ನು ಗೆಲ್ಲಿಸ್ತಾರ ಗಣಿ ಧಣಿ?
ಬಳ್ಳಾರಿ ಒಂದು ಕಾಲದಲ್ಲಿ ಇಡೀ ರಾಜ್ಯ ರಾಜಕಾರಣವನ್ನೇ ಬದಲಿಸಿದ ಜಿಲ್ಲೆ, ಜನಾರ್ಧನ ರೆಡ್ಡಿಯವರ ಬಂಧನದ ಬಳಿಕ ಇಲ್ಲಿನ ರಾಜಕೀಯ ಚಿತ್ರಣವೇ ಬದಲಾಗಿಹೋಯಿತು. ಒಂದು ಕಾಳದಲ್ಲಿ ಬಳ್ಳಾರಿಯಿಂದ ರಾಜ್ಯ ರಾಜಕಾರಣವನ್ನು ನಿಯಂತ್ರಿಸುವ ಶಕ್ತಿ ಹೊಂದಿದ್ದ ಜನಾರ್ಧನ ರೆಡ್ಡಿ ಇಂದು ತಮ್ಮ ಜಿಲ್ಲೆಗೆ ತೆರಳದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ.
ಮಾಜಿ ಗಣಿ ಉದ್ಯಮಿಗೆ ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪ ಜಿಲ್ಲೆಗಳಿಗೆ ಪ್ರವೇಶಿಸದಂತೆ ಸುಪ್ರಿಂ ಕೋರ್ಟ್ ನಿರ್ಬಂಧ ವಿಧಿಸಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಕಟ್ಟುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಜನಾರ್ಧನ ರೆಡ್ಡಿ ಬಿಜೆಪಿ ತೊರೆದರೂ ಅವರ ಸಹೋದರರಾದ ಜಿ.ಕರುಣಾಕರ ರೆಡ್ಡಿ ಮತ್ತು ಜಿ. ಸೋಮಶೇಖರ ರೆಡ್ಡಿ ಬಿಜೆಪಿಯಲ್ಲಿ ಉಳಿದುಕೊಂಡಿದ್ದಾರೆ. ಬಳ್ಳಾರಿ ನಗರದಲ್ಲಿ ಜಿ. ಸೋಮಶೇಖರ ರೆಡ್ಡಿ ಬಿಜೆಪಿಯಿಂದ ಕಣಕ್ಕಿಳಿದಿದ್ದು ಅವರ ವಿರುದ್ಧ ಜನಾರ್ಧನ ರೆಡ್ಡಿಯವ ಪತ್ನಿ ಲಕ್ಷ್ಮಿ ಅರುಣಾ ಕೆಆರ್‌ಪಿಪಿ ಪಕ್ಷದಿಂದ ಕಣಕ್ಕಿಳಿಯುವ ಮೂಲಕ ಭಾರಿ ಕುತೂಹಲ ಕೆರಳಿಸಿದೆ.
ಮಾಜಿ ಶಾಸಕ ಅನಿಲ್ ಲಾಡ್ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಬಳಿಕ ರಾತ್ರೋ ರಾತ್ರಿ ಜೆಡಿಎಸ್ ಸೇರಿ ಟಿಕೆಟ್ ಪಡೆದುಕೊಂಡು ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್ ಭರತ್ ರೆಡ್ಡಿ ಎನ್ನುವವರಿಗೆ ಟಿಕೆಟ್ ನೀಡಿದೆ. ಲಕ್ಷ್ಮಿ ಅರುಣಾ ಸ್ಪರ್ಧೆಗೆ ನಿಲ್ಲುವ ಮೂಲಕ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿಗೆ ದೊಡ್ಡ ಹಿನ್ನಡೆಯಾಗಲಿವೆ ಎನ್ನುವ ಮಾತುಗಳು ಕೇಳಿಬಂದಿವೆ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಸೋಮಶೇಖರ್ ರೆಡ್ಡಿ ಅನಿಲ್ ಲಾಡ್ ವಿರುದ್ಧ 16155 ಮತಗಳಿಂದ ಗೆಲುವು ಸಾಧಿಸಿದ್ದರು.
ಬಳ್ಳಾರಿ ನಗರ ಕ್ಷೇತ್ರದಲ್ಲಿ ಒಟ್ಟು 2,28,051 ಮತದಾರರನ್ನು ಹೊಂದಿದೆ. ಇಲ್ಲಿ ದಲಿತ ಮತದಾರರ ಪ್ರಾಬಲ್ಯವೇ ಹೆಚ್ಚಾಗಿದೆ. ವಾಲ್ಮೀಕಿ, ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳು ಕೂಡ ಹೆಚ್ಚಾಗಿದ್ದು ನಿರ್ಣಾಯಕವಾಗಲಿವೆ.
ಕ್ಷೇತ್ರಕ್ಕೆ ಹೋಗದೆಯೇ ಜನಾರ್ಧನ ರೆಡ್ಡಿ ಸಹೋದರನ ವಿರುದ್ಧ ತೊಡೆ ತಟ್ಟಿದ್ದು, ಸಹೋದರರ ಸವಾಲ್‌ನಲ್ಲಿ ಯಾರು ಗೆಲ್ತಾರೆ ಎನ್ನುವ ಕುತೂಹಲ ಮೂಡಿದೆ. ಇಬ್ಬರಿಗೂ ಕ್ಷೇತ್ರದಲ್ಲಿ ಇರುವ ಪ್ಲಸ್ ಮತ್ತು ಮೈನಸ್‌ಗಳ ಬಗ್ಗೆ ವಿಶ್ಲೇಷಣೆ.
ಲಕ್ಷ್ಮೀ ಅರುಣಾ ಗೆಲುವಿಗೆ ಪೂರಕ ಅಂಶಗಳು
1.ಅನುಕಂಪ ಮತಗಳು ಬೀಳುತ್ತಾ: ಜನಾರ್ಧನ ರೆಡ್ಡಿ ಕ್ಷೇತ್ರಕ್ಕೆ ಬರಲು ನಿರ್ಬಂಧ ಇರುವ ಹಿನ್ನಲೆಯಲ್ಲಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಣಕ್ಕಿಳಿದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅವರು ಈ ವಿಚಾರಕ್ಕೆ ಕಣ್ಣೀರು ಕೂಡ ಹಾಕಿದ್ದರು. ಹೆಣ್ಣು ಮಗಳನ್ನು ಕಣಕ್ಕಿಳಿಸಿದ್ದು, ಅನುಕಂಪದ ಆಧಾರದಲ್ಲಿ ಮತ ಬಿದ್ದರೆ ಅರುಣಾ ಗೆಲುವು ಸುಲಭವಾಗಲಿದೆ.
2.ಜನಾರ್ಧನ ರೆಡ್ಡಿ ಪ್ರಭಾವ: ಬಳ್ಳಾರಿಯಿಂದ ದೂರವಿದ್ದರೂ ಜನಾರ್ಧನ ರೆಡ್ಡಿ ಇಂದಿಗೂ ಇಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ. ಹೊಸ ಪಕ್ಷ ಕಟ್ಟಿದ್ದರೂ ಹಲವು ಪ್ರಮುಖರು ಈಗಾಗಲೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷವನ್ನು ಕಟ್ಟಿದ ಬಳಿಕ ಪತ್ನಿಯನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಟೆಯಾಗಿದ್ದು, ಹೆಚ್ಚಿನ ಶ್ರಮ ಹಾಕಲಿದ್ದಾರೆ.
3.ಬಿಜೆಪಿ ವಿರೋಧಿ ಅಲೆ: ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಕೂಡ ಜನಾರ್ಧನ ರೆಡ್ಡಿಯವರ ಗೆಲುವಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಅನಿಲ್ ಲಾಡ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವುದರಿಂದ ಕಾಂಗ್ರೆಸ್ ಮತಗಳು ಕೂಡ ಅರುಣಾಗೆ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಅರುಣಾ ಅವರಿಗೆ ಈ ವಿಚಾರಗಳೇ ಮೈನಸ್
1.ಜನಾರ್ಧನರೆಡ್ಡಿ ಅನುಪಸ್ಥಿತಿ: ಜನಾರ್ಧನ ರೆಡ್ಡಿ ಬಳ್ಳಾರಿ ಜಿಲ್ಲೆಗೆ ತೆರಳಿ ಪ್ರಚಾರ ಮಾಡಲು ಅನುಮತಿ ಇಲ್ಲದಿರುವುದು ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ರೆಡ್ಡಿ ಬಳ್ಳಾರಿಗೆ ತೆರಳಿದ್ದರೆ ಅದರ ಲೆಕ್ಕಾಚಾರವೇ ಬೇರೆ ಇರುತ್ತಿತ್ತು, ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆಯಾಗಲು ಅವರ ಅನುಪಸ್ಥಿತಿ ಕೂಡ ಕಾರಣವಾಗುತ್ತೆ ಎನ್ನಲಾಗಿದೆ.
2. ಅರುಣಾ ಅವರ ಅನುನುಭವ: ಸದ್ಯ ಕಣದಲ್ಲಿ ಸೋಮಶೇಖರ್ ರೆಡ್ಡಿ, ಅನಿಲ್ ಲಾಡ್, ಭರತ್ ರೆಡ್ಡಿಯಂತಹ ಪ್ರಭಾವಿಗಳಿದ್ದು ಮತಬೇಟೆಗೆ ಇಳಿದಿದ್ದಾರೆ. ಲಕ್ಷ್ಮಿ ಅರುಣಾ ಅವರ ಪರಿಚಯ ಜನಕ್ಕೆ ಅಷ್ಟಾಗಿ ಇಲ್ಲದ ಕಾರಣ, ರಾಜಕೀಯದಲ್ಲಿ ಅವರಿಗೆ ಅನುಭವ ಇಲ್ಲದಿರುವುದು ಹಿನ್ನಡೆಯಾಗಬಹುದು.
3. ಅನಿಲ್ ಲಾಡ್ ಪ್ರಬಲ ಪೈಪೋಟಿ: ಅನಿಲ್ ಲಾಡ್ ಕೂಡ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಸಹೋದರರ ಸವಾಲ್‌ನಲ್ಲಿ ಮತಗಳು ವಿಭಜನೆಯಾದರೆ ಅನಿಲ್ ಲಾಡ್ ಗೆಲುವು ಪಡೆದರೂ ಅಚ್ಚರಿಯೇನಿಲ್ಲ ಎನ್ನಲಾಗುತ್ತಿದೆ.
ಸೋಮಶೇಖರ ರೆಡ್ಡಿಗೆ ಮತ್ತೆ ಜನಾಶೀರ್ವಾದ?
1. ಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ: ಜನಾರ್ಧನ ರೆಡ್ಡಿ ಬಳ್ಳಾರಿಗೆ ಆಗಮಿಸಲು ನಿರ್ಬಂಧಿಸಿದ ಬಳಿಕ ಸೋಮಶೇಖರ ರೆಡ್ಡಿ ಇಲ್ಲಿ ಹೆಚ್ಚಿನ ಪ್ರಭಾ ಉಳಿಸಿಕೊಂಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಅನಿಲ್ ಲಾಡ್ ವಿರುದ್ಧ ಗೆದ್ದಿದ್ದು, ಈ ಬಾರಿ ಕೂಡ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
2.ಬಿಜೆಪಿ ಸ್ಟಾರ್ ಪ್ರಚಾರಕರು: ಬಿಜೆಪಿ ಈ ಬಾರಿ ಗೆಲ್ಲಲು ಕೇಂದ್ರದ ನಾಯಕನ್ನೇ ಹೆಚ್ಚಾಗಿ ಅವಲಂಬಿಸಿದೆ. ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಜನ ಮತ್ತೆ ಪ್ರಧಾನಿ ಮೋದಿ ಮೇಲಿನ ಒಲವಿನಿಂದ ಮತ ಹಾಕಿದರೆ ಸೋಮಶೇಖರ್ ರೆಡ್ಡಿ ಗೆಲುವು ಸುಲಭವಾಗಲಿದೆ.
3. ಮತಗಳ ವಿಭಜನೆ: ಕಳೆದ ಬಾರಿ ಪ್ರತಿಸ್ಪರ್ಧಿಯಾಗಿದ್ದ ಅನಿಲ್ ಲಾಡ್ ಈ ಬಾರಿ ಜೆಡಿಎಸ್‌ಗೆ ಸೇರ್ಪಡೆಯಾಗಿರುವುದು ಬಿಜೆಪಿಗೆ ಲಾಭವಾಗುತ್ತಾ ಎಂದು ನೋಡಬೇಕಿದೆ. ಕಾಂಗ್ರೆಸ್‌ನ ಮತಗಳು ಜೆಡಿಎಸ್‌ಗೆ ಹಂಚಿಕೆಯಾದರೆ ಬಿಜೆಪಿಗೆ ಸುಲಭ ಗೆಲುವು ದಕ್ಕುತ್ತದೆ.
ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗ್ತಾರ?
1. ಬಿಜೆಪಿ ವಿರುದ್ಧ ಜನಾಕ್ರೋಶ: ಸದ್ಯ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಎಂದು ಹೇಳಲಾಗುತ್ತಿದೆ. ಜನ ಕೂಡ ಸದ್ಯ ಬೆಲೆ ಏರಿಕೆ, ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ಬಿಜೆಪಿ ವಿರುದ್ಧ ಕೋಪಗೊಂಡಿದ್ದಾರೆ, ಅಧಿಕಾರ ವಿರೋಧಿ ಅಲೆ ಹೆಚ್ಚಾದರೆ ಸೋಮಶೇಖರ್ ರೆಡ್ಡಿ ಗೆಲುವು ಕಷ್ಟವಾಗಲಿದೆ.
2. ಸಹೋದರನ ಸವಾಲ್: ಸೋಮಶೇಖರ್ ರೆಡ್ಡಿಯವರಿಗೆ ಸದ್ಯ ಅಪಾಯ ಇರುವುದು ಸಹೋದರನ ಪಕ್ಷದಿಂದಲೇ, ಜನಾರ್ಧನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಕೆಆರ್ ಪಿಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದು, ಬಿಜೆಪಿ ಮತಗಳು ಹಂಚಿಕೆಯಾಗುವ ಸಾಧ್ಯತೆ ಇದ್ದು, ಸೋಮಶೇಖರ್ ರೆಡ್ಡಿಗೆ ಹಿನ್ನಡೆಯಾಗಲಿದೆ ಎನ್ನಲಾಗಿದೆ.
3. ಅನಿಲ್ ಲಾಡ್‌ರಿಂದ ಸ್ಪರ್ಧೆ: 2013ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅನಿಲ್ ಲಾಡ್ 2018ರಲ್ಲಿ ಸೋಲನುಭವಿಸಿದ್ದರು. ಈ ಬಾರಿ ಅನಿಲ್ ಲಾಡ್ ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿದ್ದು, ಮತ್ತೆ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಜನ ಮತ್ತೆ ಮಾಜಿ ಶಾಸಕನಿಗೆ ಮಣೆ ಹಾಕಿದರೆ, ಸೋಮಶೇಖರ್ ರೆಡ್ಡಿ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.












Click it and Unblock the Notifications