ಬಕ್ರೀದ್: ಒಂಟೆ, ಗೋವು ಕಳ್ಳಸಾಗಣೆ, ಹತ್ಯೆ ನಿಷೇಧ
ಬಳ್ಳಾರಿ, ಜೂನ್ 16: ಬಕ್ರೀದ್ ಹಬ್ಬದ ಪ್ರಯುಕ್ತ ಅನಧಿಕೃತವಾಗಿ ಒಂಟೆ, ಗೋವುಗಳ ಹತ್ಯೆ ಮಾಡುವುದು ಅಪರಾಧವಾಗಿದ್ದು, ಸರ್ಕಾರದ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕು ಎಂದು ಬಳ್ಳಾರಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಹೇಳಿದರು.
ಶನಿವಾರ ಅವರು ತಮ್ಮ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಜಿ. ಖಲೀಲ್ ಸಾಬ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಮೋದ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ನೀಡಿದ ಸೂಚನೆಗಳು: ಸಭೆಯಲ್ಲಿ ಮಾತನಾಡಿದ ಮೊಹಮ್ಮದ್ ಝುಬೇರ್, "ಹಬ್ಬದ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಮತ್ತು ಹೊರ ಜಿಲ್ಲೆಗಳಿಂದ ಪ್ರಾಣಿಗಳನ್ನು ಕಳ್ಳ ಸಾಗಾಣಿಕೆ ಮಾಡುವುದು ಅಪರಾಧವಾಗಿದೆ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ನಿಯಮ ಉಲ್ಲಂಘಿಸಿದವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು" ಎಂದು ಎಚ್ಚರಿಕೆ ನೀಡಿದರು.
ಹಬ್ಬದ ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕದಂತೆ ಎಚ್ಚರಿಕೆ ವಹಿಸುವುದು ಕಡ್ಡಾಯವಾಗಿದ್ದು, ಕಸ ವಿಲೇವಾರಿ ವಾಹನಗಳಿಗೆ ತ್ಯಾಜ್ಯ ನೀಡಬೇಕು ಎಂದು ಸೂಚಿಸಿದರು.
ಕಾನೂನು ಬಾಹಿರವಾಗಿ ಯಾರಾದರೂ ಒಂಟೆ, ಗೋಹತ್ಯೆ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಡಳಿತ, ಪಶುಸಂಗೋಪನೆ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯತಿಗಳಿಗೆ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದರು.
ಅಕ್ರಮವಾಗಿ ಒಂಟೆ, ಗೋವುಗಳು ಸಾಗಾಣಿಕೆ ಮತ್ತು ಹತ್ಯೆ ಮಾಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಬೇಕು. ಅನಧಿಕೃತ ಗೋವು/ ಒಂಟೆಗಳ ಸಾಗಾಣಿಕೆ ಕಂಡುಬಂದಲ್ಲಿ ಪೊಲೀಸ್, ನಗರಸಭೆ ಅಧಿಕಾರಿಗಳು ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅವುಗಳ ರಕ್ಷಣೆ ಮಾಡಿ ಸಮೀಪದಲ್ಲಿರುವ ಗೋಶಾಲೆಗಳಲ್ಲಿ ಸೇರಿಸಲು ಕ್ರಮಕೈಗೊಳ್ಳಬೇಕು ಮತ್ತು ಸಂಬಂಧಿತ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಬಕ್ರೀದ್ ಹಬ್ಬದ ಪ್ರಾಣಿವಧೆ ಸಂಬಂಧ ಕಾನೂನಿನ ಅರಿವನ್ನು ಧ್ವನಿವರ್ಧಕಗಳ ಮುಖಾಂತರ ಮೂಡಿಸಲಾಗಿದೆ. ಪ್ರಾಣಿ ವಧೆಯಿಂದ ಉತ್ಪತ್ತಿಯಾಗುವ ತಾಜ್ಯ ವಿಲೇವಾರಿಯನ್ನು ಸುಸೂತ್ರವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ. ಗ್ರಾಮಗಳಲ್ಲಿ ಪ್ರಾಣಿವಧೆಯ ಕಾನೂನುಗಳ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿ/ ಸಿಬ್ಬಂದಿಯವರು ಗ್ರಾಮಸ್ಥರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜೂನ್ 17ರ ಸೋಮವಾರ ಬಕ್ರೀದ್ ಆಚರಣೆ ಮಾಡಲಾಗುತ್ತದೆ.












Click it and Unblock the Notifications