ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅನಿಲ್ ಲಾಡ್ ಸ್ಪರ್ಧೆ: ಚುನಾವಣೆ ಮುಗಿಯುವರೆಗೂ ಕಪ್ಪು ಬಟ್ಟೆ ಧರಿಸಲು ನಿರ್ಧಾರ
ಬಳ್ಳಾರಿ, ಏಪ್ರಿಲ್ 17: ನನಗೆ ಕಾಂಗ್ರೆಸ್ ಟಿಕೆಟ್ ನೀಡದ ಕಾರಣ, ನನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.
ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಡಿಮೆ ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಸೋತ ನನಗೆ ಟಿಕೆಟ್ ತಪ್ಪಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಕಾರಣ ಹೇಳಿಲ್ಲ. ಅದಕ್ಕಾಗಿ ಬೆಂಬಲಿಗರ ಆಶಯದಂತೆ ಬಂಡಾಯವಾಗಿ ಸ್ಪರ್ಧೆ ಮಾಡಲು ಬಯಸಿದ್ದೇನೆ ಎಂದು ತಮ್ಮ ಮುಂದಿನ ನಿರ್ಧಾರದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ನಾನು ದೆಹಲಿಗೆ ಹೋಗಿ ಬಳ್ಳಾರಿ ನಗರ ಕ್ಷೇತ್ರದಲ್ಲಿನ ವಾಸ್ತವಾಂಶಗಳನ್ನು ಎಐಸಿಸಿ ಮುಖಂಡರಾದ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದೇನೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಾಣಲು ಪ್ರಯತ್ನಿಸಿದೆ ಆದರೆ ಆಗಲಿಲ್ಲ ಎಂದಿದ್ದಾರೆ.
ಕೂಡ್ಲಿಗಿಯ ಬಿಜೆಪಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರಿಗೆ, ವಿಜಯನಗರದ ಮಾಜಿ ಶಾಸಕ ಗವಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಕಲಘಟಿಯಲ್ಲಿ 25 ಸಾವಿರ ಮತಗಳಿಂದ ಸೋತ ಸಂತೋಷ್ ಲಾಡ್‌ಗೆ ಅವರಿಗೂ ಪಕ್ಷದ ಟಿಕೆಟ್ ನೀಡಿದ್ದೀರಿ, ನಿನ್ನೆ ಪಕ್ಷ ಬಿಡುವ ಬಿಜೆಪಿಯವರಿಗೆ ಒಂದು ಟಿಕೆಟ್ ಕೊಡುತ್ತೀದ್ದೀರಿ. ಇದು ಪಕ್ಷದ ಯಾವ ಮಾನದಂಡ. ಅದೇ ರೀತಿ ಯಾವ ಮಾನ ದಂಡದ ಮೇಲೆ ಬಳ್ಳಾರಿ ನಗರದ ಟಿಕೆಟ್ ಅನ್ನು ಭರತ್ ರೆಡ್ಡಿಗೆ ಕೊಟ್ಟಿದ್ದೀರಿ ಎಂದು ಅನಿಲ್ ಲಾಡ್ ಪಕ್ಷದ ನಾಯಕರಿಗೆ ಪ್ರಶ್ನಿಸಿದ್ದಾರೆ.
ಮಾತು ಮುಂದುವರಿಸಿದ ಅನಿಲ್ ಲಾಡ್, ಬಳ್ಳಾರಿಯ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ ಬರಲು ನಾನು ಕಾರಣ. ನಾನು ಏಪ್ರಿಲ್ 19 ಇಲ್ಲ ಏಪ್ರಿಲ್ 20ರಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಬಗ್ಗೆ ಆಲೋಚಿಸಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿ. ಹೀಗಾಗಿ ಇಂದಿನಿಂದ(ಏಪ್ರಿಲ್ 17) ಚುನಾವಣೆ ಮುಗಿಯುವ (ಮೇ 10) ವರೆಗೆಕಪ್ಪು ಬಟ್ಟೆ ಧರಿಸುವೆ ಎಂದು ಶಪಥ ಮಾಡಿದ್ದಾರೆ.

ಎರಡು ಬಾರಿ ಶಾಸಕನಾಗಿ ಒಂದು ಬಾರಿ ರಾಜ್ಯ ಸಭಾ ಸದಸ್ಯನಾದ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವೆ ಎಂದು ತಮ್ಮ ನಿರ್ಧಾರ ಸ್ಪಷ್ಟಪಡಿಸಿದರು. ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬ್ರೂಸ್ ಪೇಟೆ ಬ್ಲಾಕ್ ಅಧ್ಯಕ್ಷ ಹರ್ಷದ್ ಗನಿ, ಮಲ್ಲಿಕಾರ್ಜುನ, ಕಿರಣ್, ದಾಸ್, ವೆಂಕಟೇಶ್ ಸೇರಿದಂತೆ ಅನಿಲ್ ಲಾಡ್ ಬೆಂಬಲಿಗರು ಉಪಸ್ಥಿತರಿದ್ದರು.












Click it and Unblock the Notifications