ಸಂಡೂರು ಉಪ ಚುನಾವಣೆ: ಗೆಲುವು ನಿರ್ಧರಿಸಲಿದ್ದಾರೆ 2,36,100 ಮತದಾರರು
ಬಳ್ಳಾರಿ, ನವೆಂಬರ್ 10: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನವೆಂಬರ್ 13ರ ಬುಧವಾರ ನಡೆಯಲಿದೆ. ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಇ. ಅನ್ನಪೂರ್ಣ. ಬಿಜೆಪಿಯಿಂದ ಬಂಗಾರ ಹನುಮಂತ ಅಭ್ಯರ್ಥಿಗಳು. ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದು, 253 ಮತಗಟ್ಟೆಗಳಲ್ಲಿ ಒಟ್ಟು 2,36,100 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ನವೆಂಬರ್ 23ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಸಂಡೂರು ಉಪ ಚುನಾವಣೆಗೆ ನವೆಂಬರ್ 11ರ ಸೋಮವಾರ ಸಂಜೆ 6ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮತದಾನದ ಕಾರ್ಯಕ್ಕೆ ಕ್ಷೇತ್ರದಲ್ಲಿ 1,215 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ಉಪ ಚುನಾವಣೆ ಹಿನ್ನಲೆಯಲ್ಲಿ ನವೆಂಬರ್13ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಅಂತ್ಯದ 48 ಗಂಟೆಗೂ ಮುನ್ನ ಅಂದರೆ ನವೆಂಬರ್ 11ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಂದರ್ಭದಲ್ಲಿ ವಾಹನಗಳ ಮೂಲಕ ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು.
ನವೆಂಬರ್ 11ರ ಸಂಜೆ 6 ರಿಂದ ನವೆಂಬರ್ 14ರ ಸಂಜೆ 6 ಗಂಟೆಯವರೆಗೆ ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023ರ ಕಲಂ 163 ಅಡಿ ಪ್ರತಿಬಂಧಕಾಜ್ಞೆ ಜಾರಿಯಾಗಲಿದ್ದು, 5ಕ್ಕಿಂತ ಹೆಚ್ಚು ಜನರು ಒಟ್ಟಾಗಿ ಓಡಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚನೆ ನೀಡಲಾಗಿದೆ.
ಮದ್ಯ ಮಾರಾಟ ನಿಷೇಧ: ಸಂಡೂರು ಕ್ಷೇತ್ರದಲ್ಲಿ ಹಾಗೂ ಈ ಕ್ಷೇತ್ರಕ್ಕೆ ಹೊಂದಿಕೊಂಡ ಕಂಪ್ಲಿ, ಕುರುಗೋಡು ಮತ್ತು ಬಳ್ಳಾರಿ ತಾಲ್ಲೂಕಗಳ 5 ಕಿ. ಮೀ. ವ್ಯಾಪ್ತಿಯಲ್ಲಿ ನವೆಂಬರ್ 11ರ ಸಂಜೆ 6 ಗಂಟೆಯಿಂದ ನವೆಂಬರ್ 14ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ.
ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ರ‍್ಯಾಂಡಮೈಜೇಶನ್ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಂಡೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರು, 253 ಮತಗಟ್ಟೆಗಳಿವೆ. 1,17,789 ಪುರುಷ ಮತದಾರರು, 1,18,282 ಮಹಿಳೆ ಮತದಾರರು ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ.
ಉಪ ಚುನಾವಣೆಯನ್ನು ಶಾಂತಿಯುತ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ಮತದಾನ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 304 ಮತಗಟ್ಟೆ ಅಧಿಕಾರಿಗಳು, 304 ಸಹಾಯಕ ಅಧಿಕಾರಿಗಳು, 608 ಮತದಾನ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1,215 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
2023ರಲ್ಲಿ ಕಾಂಗ್ರೆಸ್‌ನ ಇ. ತುಕಾರಾಂ ಸಂಡೂರು ಕ್ಷೇತ್ರದಲ್ಲಿ 85,223 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಶಿಲ್ಪಾ ರಾಘವೇಂದ್ರ (49,701 ಮತ) ಎದುರಾಳಿಯಾಗಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಜಯಗಳಿಸಿದ ಇ. ತುಕಾರಾಂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಎದುರಾಗಿದೆ.
ಕಾಂಗ್ರೆಸ್ ಇ. ತುಕಾರಾಂ ಪತ್ನಿ ಇ. ಅನ್ನಪೂರ್ಣ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಇ. ಅನ್ನಪೂರ್ಣ ಪರವಾಗಿ ಪ್ರಚಾರ ನಡೆಸಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಿದೆ. ಬಂಗಾರ ಹನುಮಂತ ಕಣಕ್ಕಿಳಿಸಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಬಂಗಾರ ಹನುಮಂತ ಪರವಾಗಿ ಪ್ರಚಾರವನ್ನು ನಡೆಸಿದ್ದಾರೆ.












Click it and Unblock the Notifications