Sandur By Election 2024: ಸಂಡೂರು ಚುನಾವಣಾ ಕಣ ಅಂತಿಮ, ನ. 13ಕ್ಕೆ ಮತದಾನ
ಬಳ್ಳಾರಿ, ಅಕ್ಟೋಬರ್ 31: ಬಳ್ಳಾರಿ ಜಿಲ್ಲೆಯ ಸಂಡೂರು (ಪ.ಪಂ) ವಿಧಾನಸಭಾ ಉಪಚುನಾವಣೆ 2024ರ ಕಣ ಅಂತಿಮಗೊಂಡಿದೆ. ಅಭ್ಯರ್ಥಿಗಳು ಸಲ್ಲಿಕೆ ಮಾಡಿದ್ದ ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 30 ಕೊನೆಯ ದಿನವಾಗಿತ್ತು. ಉಪಚುನಾವಣೆ ಕಣದಲ್ಲಿ ಅಂತಿಮವಾಗಿ 6 ಅಭ್ಯರ್ಥಿಗಳಿದ್ದಾರೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಸಂಡೂರು ವಿಧಾನಸಭೆ ಉಪಚುನಾವಣಾಧಿಕಾರಿ ರಾಜೇಶ್. ಹೆಚ್. ಡಿ. ಚುನಾವಣಾ ಕಣದ ಕುರಿತು ಮಾಹಿತಿ ನೀಡಿದ್ದಾರೆ. ಸಂಡೂರು ಉಪಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ದಿನವಾದ ಬುಧವಾರದಂದು, ಓರ್ವ ಅಭ್ಯರ್ಥಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಂಡಿದ್ದು, ಅಂತಿಮ ಕಣದಲ್ಲಿ 6 ಅಭ್ಯರ್ಥಿಗಳು ಉಳಿದಿದ್ದಾರೆ.

ಅಕ್ಟೋಬರ್ 18 ರಿಂದ 25 ರ ತನಕ ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ ಒಟ್ಟು 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಕ್ಟೋಬರ್ 28ರಂದು ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮವಾಗಿದ್ದವು. ನಾಮಪತ್ರ ವಾಪಸ್ ಪಡೆಯುವ ದಿನವಾದ ಅಕ್ಟೋಬರ್ 30ರಂದು ಸ್ವತಂತ್ರ ಅಭ್ಯರ್ಥಿ ಬಂಗಾರಿ ಅನಿಲ್ ಕುಮಾರ್ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಅಂತಿಮ ಕಣದಲ್ಲಿ 6 ಅಭ್ಯರ್ಥಿಗಳು: ಸಂಡೂರು ಉಪ ಚುನಾವಣೆ ಕಣ ಅಂತಿಮವಾಗಿದೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯದ ರಾಜಕೀಯ ಪಕ್ಷಳು, ಪಕ್ಷೇತರರು ಸೇರಿ ಒಟ್ಟು 6 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದಾರೆ.
ಕಾಂಗ್ರೆಸ್‌ನಿಂದ ಈ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರ ಹನುಮಂತ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಅಂಜಿನಪ್ಪ. ಎನ್ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಟಿ. ಎಂ. ಮಾರುತಿ, ಟಿ. ಎರ್ರಿಸ್ವಾಮಿ, ಎನ್. ವೆಂಕಣ್ಣ ಅಂತಿಮ ಕಣದಲ್ಲಿ ಇದ್ದಾರೆ ಎಂದು ಉಪಚುನಾವಣಾಧಿಕಾರಿ ರಾಜೇಶ್. ಹೆಚ್. ಡಿ ತಿಳಿಸಿದ್ದಾರೆ.
2023ರ ಚುನಾವಣೆಯಲ್ಲಿ ಈ. ತುಕಾರಾಂ ಸಂಡೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪ ಚುನಾವಣೆ ಎದುರಾಗಿದೆ.
ಸಂಡೂರು ವಿಧಾನಸಭೆ ಉಪಚುನಾವಣೆಗೆ ಅಕ್ಟೋಬರ್ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25ರ ಶುಕ್ರವಾರ ಕೊನೆಯ ದಿನವಾಗಿತ್ತು. ಅಕ್ಟೋಬರ್ 28ರ ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆದಿತ್ತು. ಅಕ್ಟೋಬರ್ 30ರ ಬುಧವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. ನವೆಂಬರ್ 13ರ ಬುಧವಾರ ಮತದಾನ, ನವೆಂಬರ್ 23ರ ಶನಿವಾರ ಮತ ಎಣಿಕೆ ಕಾರ್ಯ ನಡೆಯಲಿದೆ.
ಸದ್ಯದ ಮಾಹಿತಿಯಂತೆ ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರು ಇದ್ದಾರೆ. ಮತದಾನಕ್ಕಾಗಿ 253 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ 1,17,789 ಪುರುಷ ಮತದಾರರು, 1,18,282 ಮಹಿಳೆ ಮತದಾರರು ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ.
ಈಗಾಗಲೇ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ದೀಪಾವಳಿ ಹಬ್ಬದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹ ಸಂಡೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ. ನವೆಂಬರ್ 11ರ ಸಂಜೆ ತನಕ ಬಹಿರಂಗ ಪ್ರಚಾರ ನಡೆಸಲು ಅವಕಾಶವಿದೆ.
ಮಾಜಿ ಶಾಸಕ, ಬಳ್ಳಾರಿ ಸಂಸದ ಈ. ತುಕಾರಾಂ ಪತ್ನಿ ಈ. ಅನ್ನಪೂರ್ಣರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿಯಿಂದ ಬಂಗಾರ ಹನುಮಂತ ಅಭ್ಯರ್ಥಿ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದ್ದು, ಯಾರಿಗೆ ಗೆಲುವು ಸಿಗಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications