ಕರ್ನಾಟಕ: ಭಾರಿ ಮಳೆಗೆ 13 ಸಾವು- ಪರಿಹಾರ ವಿತರಣೆ ಬಗ್ಗೆ ಮುಖ್ಯಮಂತ್ರಿ ಸೂಚನೆ ಏನು?
ಹೊಸಪೇಟೆ, ಬೆಂಗಳೂರು, ಸೆಪ್ಟಂಬರ್ 13: ಕರ್ನಾಟಕದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಮಳೆ ದಾಖಲಾಗುತ್ತಿದೆ. ಅಕ್ಟೋಬರ್ 1ರಿಂದ ಅ.13ವರೆಗೆ 13ಸಾವು ಸಂಭವಿಸಿದೆ. ಜಾನುವಾರು, ಆಸ್ತಿಪಾಸ್ತಿಗಳಿಗೆ ದೊಡ್ಡ ಹಾನಿ ಉಂಟಾಗಿದೆ. ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾದಂತೆ ನೋಡಿಕೊಳ್ಳಿ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಗುರುವಾರ ಹೊಸಪೇಟೆಯಲ್ಲಿ ಮಳೆಹಾನಿ ಸಂಭವಿಸಿದ ಪ್ರದೇಶಗಳಿಗೆ ಮುಖ್ಯಮಂತ್ರಿ ಖುದ್ದು ಭೇಟಿ ನೀಡಿದರು. ನಂತರ ಮಳೆ ಹಾನಿಗೀಡಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಸಮರ್ಪಕವಾಗಿ ಪರಿಹಾರ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಮನೆಗಳಿಗೆ ಸಂಬಂಧಿಸಿದ ಹಾನಿಯನ್ನು ದಾಖಲಿಸುವ ಹಂತದಲ್ಲಿಯೇ ಕೆಲವೆಡೆ ಲೋಪಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಲೋಪವಾಗದಂತೆ ಜಿಲ್ಲಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ವಹಿಸಬೇಕು. ವಸ್ತುಸ್ಥಿತಿ ಆಧರಿಸಿ, ಪರಿಹಾರ ಕೋರಿ ಬಂದ ಮನವಿಗಳನ್ನು ದಾಖಲಿಸಬೇಕು. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಬೊಮ್ಮಾಯಿ ಸೂಚಿಸಿದರು.

3,309 ಮನೆಗಳಿಗೆ ಹಾನಿ ಉಂಟಾಗಿದೆ
ಕಳೆದ 13 ದಿನದಲ್ಲಿ ರಾಜ್ಯದ ಅನೇಕ ಕಡೆ ಮಳೆ ದಾಖಲಾಗಿದೆ. ತೀವ್ರ ಮಳೆಯಿಂದಾಗಿ 13 ಜೀವಗಳು ಬಲಿಯಾಗಿವೆ. ಒಟ್ಟು ಸುಮಾರು 28 ಜಾನುವಾರುಗಳ ಸಾವೀಗಿಡಾಗಿವೆ. 3,309 ಮನೆಗಳಿಗೆ ಹಾನಿ ಉಂಟಾಗಿದೆ. ರಾಜ್ಯದಲ್ಲಿ ಒಟ್ಟು 6,279 ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶವಾಗಿದೆ. ಮಳೆಹಾನೀಗೀಡಾದ ಜನರಿಗೆ ಅಗತ್ಯ ನೆರವು ವಹಿಸುವ ನಿಟ್ಟಿನಲ್ಲಿ ಸರ್ಕಾರ ಐದು ಕಡೆ ಕಾಳಜಿ ಕೇಂದ್ರಗಳ ಸ್ಥಾಪನೆ ಮಾಡಿದೆ. ಇದರಲ್ಲಿ 1,330 ನೆರೆ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ ಎಂದು ರಾಜ್ಯ ಸರ್ಕಾರ ವಿವರಿಸಿದೆ.

ಬೆಳೆಹಾನಿ ಪರಿಹಾರ ನೀಡಲು ಕ್ರಮ
ಮುಂಗಾರು ಹಂಗಾಮಿನಲ್ಲಿ ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರೂ. ಹಣವನ್ನು ಪರಿಹಾರ ರೂಪದಲ್ಲಿ ವಿತರಿಸಲಾಗಿದೆ. ಇನ್ನು ಎರಡು ದಿನಗಳಲ್ಲಿ ಇನ್ನೊಂದು ಹಂತದಲ್ಲಿ ಸುಮಾರು 2 ಲಕ್ಷ ರೈತರಿಗೆ ಅಂದಾಜು 250 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇನ್ನು ಮುಖ್ಯವಾಗಿ ಜೂನ್ 1ರಿಂದ ಸೆಪ್ಟೆಂಬರ್ 30ರ ವರೆಗೆ ಮುಂಗಾರು ಋತುವಿನಲ್ಲಿ ಒಟ್ಟು 48,485 ಮನೆಗಳಿಗೆ ಹಾನಿ ಸಂಭವಿಸಿದೆ, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ವಿವರಿಸಿದ್ದಾರೆ.

ಡಿಸಿಗಳ ಪಿ.ಡಿ ಖಾತೆಯಲ್ಲಿ 635.13 ಕೋಟಿ ಲಭ್ಯ
ಮನೆಗಳ ಹಾನಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸಲು ವಿಪತ್ತು ನಿರ್ವಹಣೆ ಆಯುಕ್ತರಿಗೆ ಸೂಚಿಸಲಾಗಿದೆ. ಮಳೆಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ, ಪರಿಹಾರ ವಿತರಣೆ, ಮಾಹಿತಿ ದಾಖಲಿಸುವಲ್ಲಿ ಲೋಪಗಳಾಗದಂತೆ ತಹಸೀಲ್ದಾರರಿಗೆ ಮಾರ್ಗಸೂಚಿ ನೀಡಬೇಕು ಎಂದು ಅವರು ಹೇಳಿದರು.
ಬೆಳೆಹಾನಿ ಪರಿಹಾರವನ್ನೂ ಸಹ ತ್ವರಿತವಾಗಿ ವಿತರಿಸಬೇಕು. ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಿದ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಿಸಲು ಸೂಚಿಸಲಾಗಿದೆ. ಮೂಲಸೌಲಭ್ಯ ಹಾನಿಗೆ ಸಂಬಂಧಿಸಿದಂತೆ ಹಾನಿಯ ತೀವ್ರತೆಯನ್ನು ಆಧರಿಸಿ ಸಿ-ವರ್ಗ, ದುರಸ್ತಿಗಾಗಿ ಬಿ-ವರ್ಗ ಮತ್ತು ಪುನರ್ ನಿರ್ಮಾಣ ಅಗತ್ಯವಿರುವ ಕಾಮಗಾರಿಗಳನ್ನು ಎ-ವರ್ಗವೆಂದು ವರ್ಗೀಕರಿಸಲಾಗಿದೆ. ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಿ. ದುರ್ಬಲ ಕೆರೆಗಳು, ನೀರಿನ ಒತ್ತಡ ಹೆಚ್ಚಿರುವ ಸೂಕ್ಷ್ಮ ಪರಿಸ್ಥಿತಿಯ ಕೆರೆಗಳನ್ನು ಅವಲೋಕಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕ. ಸೇತುವೆ ನಿರ್ಮಾಣಕ್ಕೂ ಆದ್ಯತೆ ನೀಡಿ ಎಂದು ಬೊಮ್ಮಾಯಿ ತಿಳಿಸಿದರು.

ಅನುದಾನ ಕೊರತೆ ಇಲ್ಲ ಎಂದ ಸಿಎಂ
ಹಿಂದೆಂದೂ ಕಾಣದಂತಹ ಮಳೆಯಾಗುತ್ತಿದ್ದು, ದಿಢೀರ್ ಪ್ರವಾಹ ಉಂಟಾಗುವ ಹೊಳೆ, ಹಳ್ಳಗಳ ವ್ಯಾಪ್ತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ. ಬೆಳೆಹಾನಿ ಹಾಗೂ ಮನೆಹಾನಿಗೆ ಪರಿಹಾರ ನೀಡಲು ಅನುದಾನದ ಕೊರತೆ ಇಲ್ಲ. ಮೂಲಸೌಕರ್ಯ ಹಾನಿಗೆ ಬಿಡುಗಡೆ ಮಾಡಲಾದ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ, ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಮೂಲಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಮೂರು ದಿನಗಳ ನಂತರ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications