ಮಲಪ್ರಭಾ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ಬಾಗಲಕೋಟೆ, ಅಕ್ಟೋಬರ್ 30: ಮಲಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದಲ್ಲಿ ನಡೆದಿದೆ.
ಬಸವರಾಜ ಮಹಾಂತಯ್ಯ ಹಿರೇಮಠ (12) ಮತ್ತು ಪ್ರವೀಣ ರೋಣದ (12) ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರು. ಈ ಇಬ್ಬರು ಬಾಲಕರು ಬಾಚಿನಗುಡ್ಡ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಅ.29ರ ಗುರುವಾರ ಸಂಜೆ ನದಿಗೆ ಈಜಲು ಹೋಗಿದ್ದ ಈ ಬಾಲಕರು ಮನೆಗೆ ವಾಪಸ್ ಬಂದಿರಲಿಲ್ಲ. ಕೆಲ ಹೊತ್ತಿನ ಬಳಿಕ ಮನೆಯವರಿಗೆ ಅನುಮಾನ ಬಂದು ಇವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ನಂತರ ನದಿಯ ಬಳಿ ತೆರಳಿ ನೋಡಿದಾಗ, ಬಾಲಕರು ಮೃತಪಟ್ಟಿರುವ ಅನುಮಾನ ವ್ಯಕ್ತಗೊಂಡಿತ್ತು.

ಹೀಗಾಗಿ ಇಂದು ಬೆಳಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಬಾಲಕರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.












Click it and Unblock the Notifications