ಬಾಗಲಕೋಟೆ: ಮುಖ್ಯಮಂತ್ರಿ ಆಗುವುದಕ್ಕೆ ಸಿದ್ದರಾಮಯ್ಯ ಅಯೋಗ್ಯ ವ್ಯಕ್ತಿ ಎಂದ ಈಶ್ವರಪ್ಪ
ಬಾಗಲಕೋಟೆ, ಅಕ್ಟೋಬರ್, 14: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಕ್ಕೆ ಅಯೋಗ್ಯವಾದ ವ್ಯಕ್ತಿ. ಬೇರೆ ಪಕ್ಷಗಳ ನಾಯಕರ ಬಗ್ಗೆ ಹಗುರವಾಗಿ ಮಾತಾಡುತ್ತಾರೆ. ತಾನು ಸತ್ಯ ಹರಿಶ್ಚಂದ್ರ ಮೊಮ್ಮಗ ಎಂದು ಭಾವಿಸಿದ್ದಾರೆ. ಆದರೆ ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಾಗಲಕೋಟೆಯಲ್ಲಿ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ದರೂ ಯಾರನ್ನೂ ಬೆಳೆಯಲು ಬಿಡುವುದಿಲ್ಲ. ಸಿದ್ದರಾಮಯ್ಯ ಬಳಿ ಹೋಗುವವರು ಭಸ್ಮವಾಗುತ್ತಾರೆ. ಅಂತಹ ಭಸ್ಮಾಸುರನನ್ನು ಬಿಜೆಪಿ ಸುಟ್ಟು ಬಿಡುತ್ತದೆ. ನರೇಂದ್ರ ಮೋದಿಯಂತದ ವ್ಯಕ್ತಿ ಬಗ್ಗೆ ಹಗುರವಾಗಿ ಏಕಚಚನದಲ್ಲಿ ಮಾತನಾಡುತ್ತಾರೆ. ನರೇಂದ್ರ ಮೋದಿ ಇವತ್ತು ವಿಶ್ವನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಬಾರದು. ನನಗೂ ಸಿದ್ದರಾಮಯ್ಯನಿಗಿಂತ ಕೆಟ್ಟ ಭಾಷೆ ಬರುತ್ತದೆ. ನಾನು ಅದೇ ಜಾತಿಯವನೇ ಆಗಿದ್ದೇನೆ. ನಮ್ಮ ಪಕ್ಷ ಸಂಸ್ಕಾರ ಕಲಿಸಿಕೊಟ್ಟಿದೆ. ಮುಖ್ಯಮಂತ್ರಿ ಆದವರಿಗೆ, ವಿರೋಧ ಪಕ್ಷದಲ್ಲಿದ್ದವರಿಗೆ ನಾನು ಏಕವಚನದಲ್ಲಿ ಮಾತನಾಡುವುದಿಲ್ಲ. ಒಳ್ಳೆಯ ರೀತಿ ಮಾತಾಡಿ ಎಂದು ಒಬ್ಬ ಸ್ನೇಹಿತನಾಗಿ ಸಲಹೆ ನೀಡುತ್ತಿದ್ದೇನೆ," ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಈಶ್ವರಪ್ಪ ಪ್ರಶ್ನೆಗಳ ಸುರಿಮಳೆ
ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನ ಬಿಜೆಪಿಯವರು ಕಾಯುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಗತಿ ಇಲ್ಲ. ಅವರ ಜೊತೆ ನಾವು ಏಕೆ ಹೋಗೋಣ? ಚಾಮುಂಡಿಯಲ್ಲಿ ಸೋಲುತ್ತೇನೆ ಅಂದಮೇಲೆ ಬಾದಾಮಿಗೆ ಬಂದರು. ಶಾಸಕ ಆದವರು ಆ ಕ್ಷೇತ್ರದ ಜನರ ಮನಸ್ಸು ಗೆಲುವುದಕ್ಕೆ ಆಗದೇನೆ, ಚುನಾವಣೆಯಲ್ಲಿ ಸೋತು ಇನ್ನೊಂದು ಕ್ಷೇತ್ರಕ್ಕೆ ಹೋದರೆ ಅಷ್ಟು ಒಳ್ಳೆಯದು ಅಲ್ಲ ಅನ್ನವುದು ನನ್ನ ಭಾವನೆ ಆಗಿದೆ. ಸಿದ್ದರಾಮಯ್ಯನವರು ಯಾರಿಗೂ ಆತ್ಮಸ್ಥೈರ್ಯ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ದ ಹರಿಹಾಯ್ದ ಈಶ್ವರಪ್ಪ
"ರಾಹುಲ್ ಗಾಂಧಿ ಯಾತ್ರೆಗೆ ಟಿಕೆಟ್ ಬೇಕಾದವರು ಐದು ಸಾವಿರ ಜನ ಕರೆದು ತರಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಯಾತ್ರೆಗೆ ಜನ ಸೇರುತ್ತಿಲ್ಲ, ಇವರೇ ಜನರನ್ನು ಕರೆದುಕೊಂಡು ಬರುತ್ತಿದ್ದಾರೆ. ಭಾರತ್ ಜೋಡೋ ಎನ್ನಲು ಕಾಂಗ್ರೆಸ್ಗೆ ಅಧಿಕಾರ ಇದೆಯಾ? ಭಾರತವನ್ನು ಒಡೆದವರು ನೀವು. ನೆಹರು ಪ್ರಧಾನಿ ಆಗುವ ಆಸೆಗೆ ಹಿಂದುಸ್ತಾನ, ಪಾಕಿಸ್ತಾನ ಅಂತಾ ಒಡೆದಿದ್ದರು. ಪಾಕ್ನಲ್ಲಿ ಇದ್ದ 23% ಹಿಂದೂ ಜನಸಂಖ್ಯೆ ಇವತ್ತು 2%ಗೆ ಬಂದಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ಣಾಮ ಆಗಿದೆ. ಕಾಂಗ್ರೆಸ್ ಪಕ್ಷ ಬದುಕಿದೆ ಅಂತ ತೋರಿಸಲು ಯಾತ್ರೆ ಹೊರಟಿದೆ. ಭಾರತ್ ಜೋಡೋದಿಂದ ನೀವು ಮಾಡಿದ ಸಾಧನೆ ಏನು? ಎಂದು ಪ್ರಶ್ನಿಸಿದರು. ದೇಶದ ಜನರನ್ನು ಮತ್ತೊಮ್ಮೆ ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನರು ಮೂರ್ಖರಲ್ಲ. ಕಾಂಗ್ರೆಸ್ ಅನ್ನು ಮೂಲೆಗೆ ತಳ್ಳುವ ಪರಿಸ್ಥಿತಿ ಬರುತ್ತದೆ," ಎಂದು ವಾಗ್ದಾಳಿ ನಡೆಸಿದರು.