ವಿಜಯೇಂದ್ರಗೆ ಕೈ ತಪ್ಪಿದ ಟಿಕೆಟ್; ಗರಂ ಆದ ಈಶ್ವರಪ್ಪ!
ಬಾಗಲಕೋಟೆ, ಮೇ 26: ಬಿ. ವೈ. ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದೆ. ಈ ವಿಚಾರದ ಕುರಿತು ಪಶ್ನಿಸಿದ ಮಾಧ್ಯಮಗಳ ವಿರುದ್ಧ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಗರಂ ಆದರು.
ಗುರುವವಾರ ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಈಶ್ವರಪ್ಪ ಮಾತನಾಡಿದರು. ವಿಜಯೇಂದ್ರ ಸಂಬಂಧಿಸಿದ ಪ್ರಶ್ನೆಗೆ ಗರಂ ಆದ ಅವರು, "ಯಾಕೆ ಅದೊಂದನ್ನೇ ಕೇಳುತ್ತೀರಿ. ಲಕ್ಷಾಂತರ ಜನರು ಟಿಕೆಟ್ ತಪ್ಪಿದವರು ಇದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಸ್ಪಷ್ಟವಾಗಿ ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ದ ಅಂತ ಹೇಳಿದ್ದಾರೆ" ಎಂದರು.
"ಅಷ್ಟಕ್ಕೆ ನೀವು ವಿಜಯೇಂದ್ರ, ರಾಘವೇಂದ್ರ ಅಂತಾನೆ ಇದ್ದೀರಾ. ಟಿಕೆಟ್‌ಗೆ ಎಷ್ಟು ಜನರು ಅರ್ಜಿ ಹಾಕಿದ್ದಾರೆ. ಅವರ ಬಗ್ಗೆ ಯಾಕೆ ನೀವು ಕೇಳೋದಿಲ್ಲ. 30-40 ವರ್ಷ ಕೆಲಸ ಮಾಡಿದ ಕಾರ್ಯಕರ್ತರಿಗೆ ಟಿಕೆಟ್ ಸಿಕ್ಕಿಲ್ಲ. ಅವರೆಲ್ಲ ಸುಮ್ಮನಿದಾರೆ ಅಲ್ವ?. ನಮ್ಮ ಲಿಂಗರಾಜ ಪಾಟೀಲ್ ಕೂಡ ಟಿಕೆಟ್ ಸಿಗದಿದ್ದಕ್ಕೆ ಸುಮ್ಮನಿದ್ದಾರೆ. ಅವರ ಬಗ್ಗೆ ಯಾಕೆ ಕೇಳುತ್ತಿಲ್ಲ. ನಿಮಗೂ ರಾಜಕೀಯ ಮಾಡುವ ಚಟ" ಎಂದು ಅಸಮಾಧಾನಗೊಂಡರು.

ಸಚಿವ ಸ್ಥಾನ ಸಿಗುವ ಬಗ್ಗೆ ಪ್ರತಿಕ್ರಿಯೆ
ಸಚಿವ ಸ್ಥಾನ ಪುನಃ ಸಿಗುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, "ನಾನು ಚಾಮುಂಡಿ ದೇವಸ್ಥಾನಕ್ಕೆ ಹೋಗಿ ಬಂದೆ, ನಮ್ಮ ಮನೆ ದೇವರು ಚೌಡೇಶ್ವರಿ. ನಾನೇನಾದರೂ ತಪ್ಪು ಮಾಡಿದರೆ ಚೌಡೇಶ್ವರಿ ನನಗೆ ಶಿಕ್ಷೆ ಕೊಡಲಿ. ನಾ ತಪ್ಪು ಮಾಡಿಲ್ಲ ಅಂದರೆ ಶಿಕ್ಷೆಯಿಂದ ಹೊರಬರಲಿ. ಇದು ದೇವರಲ್ಲಿ ನನ್ನ ಪ್ರಾರ್ಥನೆ. ಇನ್ನೊಂದು ವಾರ ಹದಿನೈದು ದಿನದಲ್ಲಿ ಇದಕ್ಕೊಂದು ಅಂತಿಮ ರೂಪ ಬರುತ್ತದೆ ಅಂದುಕೊಂಡಿದ್ದೇನೆ. ಸಚಿವ ಸಂಪುಟ ಸೇರಿಸಿಕೊಳ್ಳೋದು, ಬಿಡೋದು ಕೇಂದ್ರ ನಾಯಕರ ತೀರ್ಮಾನ ಅದಕ್ಕೆ ನಾನು ಬದ್ದ. ನಾನು ಪಕ್ಷದ ಶಿಸ್ತಿನ ಸಿಪಾಯಿ" ಎಂದರು.
"ನೂರಕ್ಕೆ ನೂರು ದೇವರ ಕೃಪೆಗೆ ನಾನು ಪಾತ್ರವಾಗುತ್ತೇನೆ. ನಮ್ಮ ಮನೆ ದೇವರ ಮೇಲೆ ನನಗೆ ನಂಬಿಕೆ ಇದೆ. ನಾನು ಯಾವುದೇ ಕಳಂಕ ಇಲ್ಲದೆ ಹೊರ ಬರುತ್ತೇನೆ. ಸಂಪುಟ ಸೇರ್ಪಡೆ ಬಗ್ಗೆ ನಾ ಹೇಳಲ್ಲ, ಅದು ಕೇಂದ್ರ ನಾಯಕರಿಗೆ ಬಿಟ್ಟ ವಿಚಾರ. ಕಾಂಗ್ರೆಸ್‌ನಲ್ಲಿ ಟಿಕೆಟ್ ಬಗ್ಗೆ ಸಿದ್ದರಾಮಯ್ಯನದ್ದು ಒಂದು ಗುಂಪು, ಡಿಕೆಶಿ ಒಂದು ಗುಂಪು ಬಡಿದಾಡುತ್ತಿದ್ದಾರೆ. ಬಿಜೆಪಿಯಲ್ಲಿ ನಾಲ್ಕು ಟಿಕೆಟ್ ಕೊಟ್ಟರೂ ಯಾರಾದರೂ ಏನಾದರೂ ಕೇಳಿದರೆ?. ಹಾಗೆ ನಮ್ಮ ಕೇಂದ್ರ ನಾಯಕರ ತೀರ್ಮಾನಕ್ಕೆ ನಾವು ಬದ್ದ, ಇದು ನಮ್ಮ ಪಕ್ಷದ ಶಿಸ್ತು" ಎಂದರು.

ಮುಸ್ಲಿಂ ಮತಕ್ಕಾಗಿ ನಾಟಕ
"ದೇವೇಗೌಡರ ವಂಶ ನನಗೂ ಒಂದು ಆದರ್ಶ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನು ಎಲ್ಲಾ ಕುಟುಂಬ ಇಟ್ಟುಕೊಳ್ಳಬೇಕು. ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದರೆ ಅದನ್ನು ನಾನು ಟೀಕೆ ಮಾಡಲ್ಲ" ಎಂದರು.
"ಮಸೀದಿ ರಿಪೇರಿ ಮಾಡುವಾಗ ದೇವಾಲಯ ಸಿಕ್ಕಿದೆ, ಅದೇ ಚರ್ಚೆ ನಡೆಯುತ್ತಿದೆ. ರಾಮ ಮಂದಿರ ಬಗ್ಗೆ ಟೀಕೆ ಮಾಡುತ್ತಿದ್ದರೂ. ಇವತ್ತಲ್ಲ ನಾಳೆ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತದೆ. ಅದೇ ಕುಮಾರಸ್ವಾಮಿ, ಡಿಕೆಶಿ, ಸಿದ್ದರಾಮಯ್ಯ, ದೇವೇಗೌಡರು ಅದೇ ರಾಮ ಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ. ಮೊನ್ನೆ ಡಿಕೆಶಿ ದಂಪತಿ ಸಮೇತ ಕೇದಾರನಾಥ ದೇಗುಲಕ್ಕೆ ಹೋಗಿಬಂದಿದ್ದಾರೆ, ಸಂತೋಷ" ಎಂದು ಈಶ್ವರಪ್ಪ ಹೇಳಿದರು.

ಹೆಗ್ಗಡೇವಾರ್ ಇಲ್ಲದಿದ್ದರೆ ದೇಶ ತುಂಡು ತುಂಡಾಗುತ್ತಿತ್ತು
ಪಠ್ಯಪುಸ್ತಕದಲ್ಲಿ ಹೆಗ್ಗಡೇವಾರ್ ಭಾಷಣ ಸೇರಿಸಿದ್ದಕ್ಕೆ ವಿರೋಧದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ, "ದೇಶದ ಸಂಸ್ಕೃತಿ ವಿಚಾರದಲ್ಲಿ ಹೆಗ್ಗಡೇವಾರ್ ಮಾಡಿರುವ ಭಾಷಣದ ಒಂದು ಅಂಶವನ್ನು ಸೇರಿಸಲಾಗಿದೆ ಅಷ್ಟೇ. ಅದನ್ನು ಬಿಟ್ಟು ಪಠ್ಯದಲ್ಲಿ ಮಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ?. ಈಶ್ವರ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ?" ಎಂದು ಅಸಮಧಾನ ಹೊರಹಾಕಿದರು.
"ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ಗ್ರೇಟ್ ಇವುಗಳನ್ನು ನಮ್ಮ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿದರೋ ನಮ್ಮ ಸಂಸ್ಕೃತಿಯನ್ನು ಒಡೆದು ಪುಡಿ ಪುಡಿ ಮಾಡಿದರೋ, ಅಂಥವರ ವೈಭವೀಕರಣ ನಮ್ಮ ಪಠ್ಯದಲ್ಲಿ ಇತ್ತು. ಭಗತ್ ಸಿಂಗ್ ಪಠ್ಯ ತೆಗೆದಿದ್ದು ಸುಳ್ಳು. ನಾರಾಯಣ ಗುರು ವಿಚಾರ ತೆಗೆದಿದ್ದು ಸುಳ್ಳು, 1925 ರಲ್ಲಿ ಹಿಂದೂ ಸಮಾಜ ಒಂದು ಮಾಡುವ ಪ್ರಯತ್ನವನ್ನು ಹಗ್ಗಡೇವಾರ್ ಮಾಡಿದ್ದರು. ಹೆಗ್ಗಡೇವಾರ್ ಆ ವಿಚಾರ ಹರಡದೇ ಇದ್ದಿದ್ದರೆ ಈ ದೇಶ ತುಂಡು ತುಂಡಾಗಿ ಹೋಗುತ್ತಿತ್ತು" ಎಂದು ಈಶ್ವರಪ್ಪ ಹೇಳಿದರು.

ಕಾಶಿ, ಮಥುರಾ ಮಸೀದಿಗಳು ನಮ್ಮ ವಶ
"ಮತ್ತೊಂದೆಡೆ ಕಾಶಿ ಮಥುರಾ ಸೇರಿದಂತೆ ದೇಶದಲ್ಲಿರುವ 36 ದೇವಾಲಯಗಳು ಧ್ವಂಸ ಆಗಿದೆ ಎನ್ನುವ ಅಂಶಗಳು ಬೆಳಕಿಗೆ ಬರ್ತಿವೆ. ಕಾಶಿ, ಮಥುರಾ ಮಸೀದಿಗಳು ಕೂಡ ನಮ್ಮ ನಮ್ಮ ಕೈ ವಶ ಆಗುತ್ತವೆ. ಮಥುರಾ ಬಗ್ಗೆ ಕೂಡ ಕೋರ್ಟ್‌ನಲ್ಲಿ ಗುರುವಾರ ತೀರ್ಮಾನ ಆಗುತ್ತಿದೆ. ಐದು ಜನ ತಾಯಂದಿರು ಕೋರ್ಟ್ ಹೋಗಿರುವ ಸಂದರ್ಭದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನದ ಪ್ರಕಾರವಾಗಿ ಕೋರ್ಟ್ ಆದೇಶ ಕೊಟ್ಟಿದೆ. ನಾಲ್ಕು ದಿನದಲ್ಲಿ ಸರ್ವೆ ಮಾಡಿ ರಿಪೋರ್ಟ್ ಕೊಡಿ ಎಂದಿದೆ. ಈಗಾಗಲೇ ದೇಶಕ್ಕೆ ಪ್ರಪಂಚಕ್ಕೆ ಗೊತ್ತಾಗಿದೆ. ಈಶ್ವರಲಿಂಗ ಇದೆ, ಗಣಪತಿ ಇದೆ, ಆಂಜನೇಯ ಪ್ರತಿಮೆ ಇದೆ ಅನ್ನೋದು ಬಹಿರಂಗವಾಗಿದೆ. ಮಸೀದಿನಲ್ಲಿ ಯಾರಾದರೂ ಈಶ್ವರ, ಗಣಪತಿ, ಗೌರಿ ಇಟ್ಟುಕೊಳ್ಳುತ್ತಾರಾ?. ಇದು ದೇಶದಲ್ಲಿರುವ ಎಲ್ಲರಿಗೂ ಸ್ಪಷ್ಟವಾಗಿದೆ" ಎಂದರು.
"ಅಯೋಧ್ಯೆ ಆಯಿತು. ಇವತ್ತಲ್ಲ ನಾಳೆ ಕಾಶಿಯ ಆ ದೇವಸ್ಥಾನ ಮತ್ತು ಮಸೀದಿ ಕೂಡ ನಮ್ಮ ಕೈ ವಶಕ್ಕೆ ಆಗುತ್ತದೆ. ಕಾಶಿ ಮಸೀದಿ ಕೂಡ ನಮ್ಮ ಕೈಯಲ್ಲಿ ಬರುತ್ತೆ ಅದರಲ್ಲಿ ಯಾವ ಅನುಮಾನ ಕೂಡ ಇಲ್ಲ. ಅದೇ ರೀತಿ ಶ್ರೀಕೃಷ್ಣ ಜನ್ಮ ಸ್ಥಾನ ಮಥುರಾ ನಮ್ಮ ವಶ ಆಗುತ್ತದೆ. ಸಂಶೋಧನೆ ಮಾಡಿ ಹೇಳಬೇಕು ಎನ್ನುವುದು ಇಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ನಮ್ಮ ಶ್ರದ್ಧಾ ಕೇಂದ್ರಗಳಿಗೆ ಗೌರವ ಸಿಗುತ್ತಿದೆ. ನಮ್ಮ ಸಂಸ್ಕೃತಿ ಉಳಿಯುತ್ತಿದೆ ಅದು ಕಾನೂನು ಬದ್ಧವಾಗಿದೆ ಆಗುತ್ತಿದೆ" ಎಂದರು.












Click it and Unblock the Notifications