ಮುಳುಗುವ ಹಡಗಿನ ನಾವಿಕ ಖರ್ಗೆ: ಸಚಿವ ಗೋವಿಂದ ಕಾರಜೋಳ
ಬಾಗಲಕೋಟೆ, ಅಕ್ಟೋಬರ್ 17: ಕೃಷ್ಣ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಚೇರಿಗಳಿಗೆ ಒಟ್ಟು 40 ಹೊಸ ಬೊಲೇರೋ ವಾಹನಗಳನ್ನು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಸ್ತಾಂತರಿಸಿದರು.
ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ. ಮುಳುಗುವ ಹಡಗಿನಲ್ಲಿ ನಾವಿಕನನ್ನಾಗಿ ಖರ್ಗೆ ಅವರನ್ನು ಮಾಡುತ್ತಿದ್ದಾರೆ. 10 ವರ್ಷ ಯುಪಿಎ ಸರ್ಕಾರ ಇತ್ತು. ಆಗ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು, ಅವಾಗ ಯಾಕೆ ಮಾಡಲಿಲ್ಲ? ದೇಶದಲ್ಲಿ ಅಧಿಕಾರಿ ನಡೆಸುವಾಗ ಮಾಡಿದ್ದರೆ ಅದಕ್ಕೊಂದು ಅರ್ಥ ಇತ್ತು. ರಾಜ್ಯದಲ್ಲಿ 9 ಬಾರಿನೋ 11 ಬಾರಿನೋ ಆಯ್ಕೆ ಆಗಿರುವ ಖರ್ಗೆ ಅವರನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಬಹುದಿತ್ತು, ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನವರು ದೀನದಲಿತರನ್ನ ವೋಟ್ ಬ್ಯಾಂಕ್ ಮಾಡಿಕೊಳ್ಳುವ ಸಲುವಾಗಿ ಅಷ್ಟೇ ರಾಜಕಾರಣ ಮಾಡುತ್ತಾರೆ. ದಲಿತರ ಉದ್ದಾರ ಆಗಲಿ, ಅವರಿಗೆ ಕೊಡುವುದಾಗಲಿ ಕಾಂಗ್ರೆಸ್ ಯಾವತ್ತೂ ಮಾಡಿಲ್ಲ. ಆದರೆ ನಮ್ಮ ಸರ್ಕಾರ ಎಲ್ಲ ವರ್ಗದವರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತದೆ. ಯಾವುದೇ ಸಮಾಜಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಮೀಸಲಾತಿ ಜಾರಿಗೆ ತರುತ್ತೇವೆ. ಕಾಂಗ್ರೆಸ್ ಈ ದೇಶದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನವನಗರದ ಕಲಾಭವನದ ಆವರಣದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೊಸ ಬೊಲೇರೋ ವಾಹನಗಳಿಗೆ ಪೂಜೆ ಸಲ್ಲಿಸಿ, ನಂತರ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಕೃಷ್ಣಾ ಭಾಗ್ಯ ಜಲ ನಿಮಗದ ವ್ಯವಸ್ಥಾಪಕ ನಿರ್ದೇಶಕ ಎಸ್.ಶಿವಕುಮಾರ್, ಮುಖ್ಯ ಇಂಜಿನಿಯರ್ ಎಚ್.ಸುರೇಶ್, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಮನ್ಮಥಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಗೋವಿಂದ ಕಾರಜೋಳ ಅವರು, ಕೃಷ್ಣ ಭಾಗ್ಯ ಜಲ ನಿಗಮದ 134ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಅನುಮೋದನೆಗೊಂಡಿದ್ದು, ಇದರಂತೆ 40 ಬೊಲೇರೋ ವಾಹನಗಳನ್ನು ನಿಗಮದಿಂದ ಖರೀದಿಸಲಾಗಿದೆ. ಇದರಲ್ಲಿ 6 ವಾಹನಗಳನ್ನು ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಕಚೇರಿಗೆ ನೀಡಲಾಗುತ್ತಿದೆ ಎಂದರು.












Click it and Unblock the Notifications