ಬಾದಾಮಿಯ ಖಾಸಗಿ ಶಾಲೆ ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು
ಬಾಗಲಕೋಟೆ, ಮೇ 11 : ತೀವ್ರ ಕುತೂಹಲ ಕೆರಳಿಸಿರುವ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯಿಂದ ಶ್ರೀರಾಮುಲು ಹಾಗೂ ಜೆಡಿಎಸ್ ನಿಂದ ಮಾವಿನಮರದ ಸ್ಪರ್ಧಿಸುತ್ತಿದ್ದಾರೆ.
ಅಂದಹಾಗೆ ಇಂದು ಶುಕ್ರವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಆಡಿಯೋ ಆಲಿಸಿ, ಚಾಲುಕ್ಯ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೇಲೆ
ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಸುಮಾರು 1,62,830 ನಗದು ಹಣ ಜಪ್ತಿ ಮಾಡಿದ್ದಾರೆ. ಶಾಸಕ ಬಿಬಿ ಚಿಮ್ಮನಕಟ್ಟಿ ಆಪ್ತರ ಮೂಲಕ ಈ ಅಕ್ರಮ ಹಣ ಸಂಗ್ರಹ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮಹಿಳೆಯೊಬ್ಬಳು ಚುನಾವಣಾ ಅಧಿಕಾರಿಗೆ ಕರೆ ಮಾಡಿ ಶಾಲೆಯಲ್ಲಿ ಹಣ ಇಟ್ಟಿರುವುದರ ಬಗ್ಗೆ ದೂರು ನೀಡಿರೋ ಆಡಿಯೋ ವೈರಲ್ ಆಗಿತ್ತು. ಇದನ್ನು ಆಧರಿಸಿ ಡಿಸಿ ಸೂಚನೆ ಮೇರೆಗೆ ಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಶಾಲೆ ಶಾಸಕ ಬಿಬಿ ಚಿಮ್ಮನಕಟ್ಟಿ ಆಪ್ತ ರಮೇಶ್ ಪೂಜಾರಗೆ ಸೇರಿರುವುದು ಎಂದು ಗುರುತಿಸಲಾಗಿದೆ. ಹಣಕ್ಕೆ ಸೂಕ್ತ ದಾಖಲೆ ನೀಡದಿರುವುದರಿಂದ ಜಪ್ತಿ ಮಾಡಲಾಗಿದ್ದು, ಬಾದಾಮಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಳಕಲ್ ನಲ್ಲಿ 20 ಲಕ್ಷ ಹಣ ಜಪ್ತಿ:
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಹಣದ ಮೇಲೆ ಹುನಗುಂದ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿದೆ. ಹಣವನ್ನು ಸಂದೀಪ ಮಜಿ ಎಂಬುವರ ಮನೆಯಲ್ಲಿ ಸಂಗ್ರಹಿಸಲಾಗಿದ್ದು, ಇದು ಉದ್ಯಮಿ ಕಮಲ್ ಲಾಲ್ ವರ್ಮಾ ಎಂಬುವರಿಗೆ ಸೇರಿದ ಹಣ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಚುನಾವಣಾಧಿಕಾರಿ ಶಶಿಧರ ಕುರೇರ ಭೇಟಿ ನೀಡಿ, ಹಣ ಯಾರದ್ದು, ಯಾವ ಪಕ್ಷಕ್ಕೆ ಸೇರಿದ್ದು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications