ಬಾಗಲಕೋಟೆ : ರಸ್ತೆ ಅಪಘಾತ, ಡಿವೈಎಸ್‌ಪಿ ಸೇರಿ ಮೂವರು ದುರ್ಮರಣ
Recommended Video

ಬಾಗಲಕೋಟೆ, ಮೇ 10 : ಲಾರಿ ಮತ್ತು ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ತಾಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಬುಧವಾರ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು, ಓರ್ವ ಚಾಲಕ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಸಿಐಡಿ ಡಿವೈಎಸ್ ಪಿ ಬಾಳೇಗೌಡ (55) , ಸಿಐಡಿ ಸಿಪಿಐ ಕೆ.ಹೆಚ್.ಶಿವಸ್ವಾಮಿ (55), ಚಾಲಕ ವೇಣು ಗೋಪಾಲ (23) ಎಂದು ಗುರುತಿಸಲಾಗಿದೆ. ಮೂವರು ಬೆಂಗಳೂರಿನಿಂದ ಬಾಗಲಕೋಟೆಗೆ ಚುನಾವಣೆ ಕರ್ತವ್ಯಕ್ಕಾಗಿ ತೆರಳುತ್ತಿದ್ದರು.

ಸ್ಥಳಕ್ಕೆ ಬಾಗಲಕೋಟೆ ಎಸ್‌ಪಿ ವಂಶಿಕೃಷ್ಣ ಹಾಗೂ ಡಿವೈಎಸ್ ಪಿ ಗಿರೀಶ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಬಾಳೇಗೌಡ ಬೆಂಗಳೂರಿನ ಕೊಟ್ಟಿಗೆಪಾಳ್ಯದ ನಿವಾಸಿ. ಸಿಪಿಐ ಕೆ.ಎಚ್ ಶಿವಸ್ವಾಮಿ ಚಾಮರಾಜನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಚಾಲಕ ಹೋಮ್ ಗಾರ್ಡ್ ಆಗಿದ್ದು, ವಿವರ ಲಭ್ಯವಾಗಿಲ್ಲ.
ಮೃತದೇಹವನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಜೀಪ್ ಲಾರಿಗೆ ಡಿಕ್ಕಿ ಹೊಡೆದು, ಈ ಅಪಘಾತ ಸಂಭವಿಸಿದೆ. ಲಾರಿ ಎಡ ಭಾಗದಲ್ಲಿಯೇ ಇದ್ದು, ಮೇಲ್ನೋಟಕ್ಕೆ ಪೊಲೀಸ್ ವಾಹನ ಚಾಲಕನ ನಿಯಂತ್ರ ತಪ್ಪಿ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬಾಗಲಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಡಿವೈಎಸ್‌ಪಿ ಬಾಳೇಗೌಡರು ಅಪರಾಧ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡಿದ್ದರು. ಖಡಕ್ ಅಧಿಕಾರಿಯಾಗಿ ರೌಡಿಗಳನ್ನು ಮಟ್ಟ ಹಾಕುವ ಕೆಲಸ ಮಾಡಿದ್ದರು. ತುಮಕೂರ,ಬೆಂಗಳೂರ ಸೇರಿದಂತೆ ಹಲವು ಕಡೆ ಅವರು ಕೆಲಸ ಮಾಡಿದ್ದರು.












Click it and Unblock the Notifications