ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಬಾಗಲಕೋಟೆ, ಮೇ 31: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಊರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಕುಡಿಯಲು ನೀರಿಲ್ಲದಂತಾಗಿದ್ದು ಊರಿನ ಜನತೆ ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ತಿರುಗಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಈ ಗುಳೇದಗುಡ್ಡ ಪಟ್ಟಣ ಬರುತ್ತದೆ. ಪ್ರಸ್ತುತ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದು, ರಾಜ್ಯದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ನಾಯಕರಾಗಿದ್ದಾರೆ.
ತಮ್ಮ ಬಾದಾಮಿ ಕ್ಷೇತ್ರಕ್ಕೆ ಕೋಟಿ ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಆದರೆ ಅದೇ ಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಮಾತ್ರ ಬಹಳ ವರ್ಷಗಳಿಂದ ಕುಡಿಯುವ ನೀರಿನ ಬವಣೆ ಮಾತ್ರ ನೀಗುತ್ತಿಲ್ಲ. ಊರಿನ ಜನರು ಹೊರಗೆ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ಬೋರ್ ವೆಲ್‌ನಲ್ಲಿ ಕುಡಿಯುವ ನೀರನ್ನು ಹೊತ್ತು ತರುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಮಾಡುವ ಕೆಲಸ ಬಿಟ್ಟು ಕುಟುಂಬದ ಓರ್ವ ಸದಸ್ಯ ಮೈಲಿಗಟ್ಟಲೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಗುಳೇದಗುಡ್ಡ ಪಟ್ಟಣದಲ್ಲಿ ಈ ಸ್ಥಿತಿ ನಿರ್ಮಾಣ ಆಗಿದ್ದರೂ ಯಾರೂ ಕೂಡಾ ತಲೆಕೆಡಿಸಿಕೊಂಡಿಲ್ಲ. ಗುಳೇದಗುಡ್ಡ ಪಟ್ಟಣಕ್ಕೆ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಿದ್ದರಾಮಯ್ಯನವರು ಇದಕ್ಕೆ ಶಾಶ್ವತವಾಗಿ ಪರಿಹಾರ ನೀಡುವ ಕಡೆ ಗಮನ ಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 5 ಬಂದ್; ಗುಳೇದಗುಡ್ಡ ಪಟ್ಟಣದಲ್ಲಿ 7 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ ಎರಡು ಮಾತ್ರ ಸರಿ ಇದ್ದು, ಉಳಿದ ಘಟಕಗಳು ಬಂದ್ ಆಗಿ ಎಷ್ಟೋ ದಿನಗಳು ಕಳೆದಿವೆ. ಇನ್ನು ಪಟ್ಟಣದಲ್ಲಿ ಒಳಭಾಗದಲ್ಲಿ ಎಲ್ಲಿಯೂ ನೀರಿನ ಬೋರ್ ವೆಲ್ ಗಳಾಗಲಿ ನೀರಿನ ಮೂಲಗಳಾಗಲಿ ಇಲ್ಲ. ಹೀಗಾಗಿ ಊರು ಹೊರಗಿನ ಜಮೀನುಗಳಲ್ಲಿ ಇರುವ ಬೋರ್ ವೆಲ್ ಗಳಲ್ಲಿನ ನೀರನ್ನು ಕುಡಿಯುವ ಪರಿಸ್ಥಿತಿ ಗುಳೇದಗುಡ್ಡ ಜನರಿಗೆ ಬಂದಿದೆ.
ಆಲಮಟ್ಟಿ ಜಲಾಶಯ ನೀರು ನಿಂತಿದೆ; ಆಲಮಟ್ಟಿ ಜಲಾಶಯದಿಂದ ನೀರು ಸರಬರಾಜು ಆಗುತ್ತಿದ್ದರು ಕಳೆದ ಹತ್ತು ದಿನಗಳಿಂದ ಅದು ನಿಂತಿದೆ. ಇನ್ನು ಪೈಪ್ ಲೈನ್ ದುರಸ್ತಿ ಹಿನ್ನೆಲೆ ಪಟ್ಟಣದಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಇನ್ನು ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳನ್ನು ಕೇಳಿದರೆ, ವಿದ್ಯುತ್ ಮೋಟರ್ ಸಮಸ್ಯೆಯಾಗಿದ್ದು, ಆಲಮಟ್ಟಿ ಜಾಕ್ವೆಲ್ ನಿಂದ ನೀರು ತರುವುದಕ್ಕೆ ಆಗಿರಲಿಲ್ಲ.

ಸದ್ಯ ಅದನ್ನು ಸರಿಪಡಿಸಿದ್ದು ಆಲಮಟ್ಟಿ ನೀರು ಪಟ್ಟಣಕ್ಕೆ ಬರುತ್ತಿದೆ. ಇನ್ನು ಪಟ್ಟಣದಲ್ಲಿ ಪೈಪ್ ಲೈನ್ ಕಾಮಗಾರಿ ದುರಸ್ತಿ ಮಾಡಲಾಗುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕಗಳು ತಾಂತ್ರಿಕ ತೊಂದರೆ ಹಿನ್ನೆಲೆ ಬಂದ್ ಆಗಿವೆ. ಅತಿ ಶೀಘ್ರದಲ್ಲಿ ಘಟಕ ದುರಸ್ತಿ ಮಾಡಿ ಜನತೆಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವ ಭರವಸೆ ನೀಡುತ್ತಿದ್ದಾರೆ.
ಒಟ್ಟಾರೆ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾಗಿ ಬಂದರೂ ಗುಳೇದಗುಡ್ಡ ಪಟ್ಟಣದ ನೀರಿನ ಬವಣೆ ಮಾತ್ರ ನೀಗುತ್ತಿಲ್ಲ. ಅನೇಕ ವರ್ಷಗಳಿಂದ ಉಂಟಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಸಿದ್ದರಾಮಯ್ಯ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications