ಸಿದ್ದರಾಮಯ್ಯ ಕ್ಷೇತ್ರದ ಜನರಿಗೆ ಹೊಸ ಜವಾಬ್ದಾರಿ ಕೊಟ್ಟ ಬಿಎಸ್‌ವೈ!
ಬಾಗಲಕೋಟೆ, ಏಪ್ರಿಲ್ 30; ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರ ಕಣ ರಂಗೇರಿದೆ. ಮೇ 10ರಂದು ನಡೆಯುವ ಚುನಾವಣೆಗಾಗಿ ವಿವಿಧ ಪಕ್ಷಗಳ ನಾಯಕರು ತಂಡ ತಂಡವಾಗಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇನೆ ಎಂಬ ಗುರಿಯೊಂದಿಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಚಾರ ಕೈಗೊಂಡಿದ್ದಾರೆ.
ಭಾನುವಾರ ಯಡಿಯೂರಪ್ಪ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಕೆರೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಬಾದಾಮಿ ಕ್ಷೇತ್ರದ ಹಾಲಿ ಶಾಸಕರು ಪ್ರತಿಪಕ್ಷ ನಾಯಕ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರು ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಾದಾಮಿಯಲ್ಲಿ ಭೀಮಸೇನ ಚಿಮ್ಮನಕಟ್ಟಿ ಕಾಂಗ್ರೆಸ್ ಅಭ್ಯರ್ಥಿ.

ಬಿಜೆಪಿ ಅಭ್ಯರ್ಥಿ ಶಾಂತನಗೌಡ ಪಾಟೀಲ್ ಪರವಾಗಿ ಪ್ರಚಾರ ನಡೆಸಿದ ಯಡಿಯೂರಪ್ಪ ಸಿದ್ದರಾಮಯ್ಯ ಕ್ಷೇತ್ರದ ಜನರಿಗೆ ಹೊಸ ಜವಾಬ್ದಾರಿ ನೀಡಿದರು. "ವರುಣಾದಲ್ಲಿ ಸ್ಪರ್ಧಿಸಿರುವ ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ನೀವು ಬಾದಾಮಿಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಳ್ಳಿ" ಎಂದು ಜನರಿಗೆ ಕರೆ ನೀಡಿದರು.
ನಂಬಿಕೆ ದ್ರೋಹ; "ಸಿದ್ದರಾಮಯ್ಯ ಬಾದಾಮಿಯ ಜನರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ. ಇಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲ್ಲುವುದಿಲ್ಲ ಎಂದು ತಿಳಿದು, ಇಲ್ಲಿಂದ ಅಲ್ಲಿಗೆ ಹೋಗಿ ಕಣಕ್ಕಿಳಿದಿದ್ದಾರೆ. ಇಂಥವರಿಗೆ ತಕ್ಕ ಪಾಠ ಕಲಿಸಬೇಕು. ಅದಕ್ಕೆ ಬಾದಾಮಿಯಲ್ಲಿ ಬಿಜೆಪಿ ಬೆಂಬಲಿಸಿ" ಎಂದು ಯಡಿಯೂರಪ್ಪ ಹೇಳಿದರು.

"ಕಾಂಗ್ರೆಸ್ ನಾಯಕರು ಅಪ ಪ್ರಚಾರವನ್ನು ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯದ ನಾಯಕ ವೀರೇಂದ್ರ ಪಾಟೀಲರಿಗೆಮೋಸ ಮಾಡಿದ್ದು ಕಾಂಗ್ರೆಸ್ ಪಕ್ಷ. ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ನಿಂತು ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್ ನಾಯಕರು ದ್ರೋಹ ಮಾಡಿದ್ದಾರೆ. ಇಂತಹ ಪಕ್ಷಕ್ಕೆ ಸಮುದಾಯದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ" ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
"ಬಿಜೆಪಿ ಪಕ್ಷ ಯಡಿಯೂರಪ್ಪಗೆ ಅನ್ಯಾಯ ಮಾಡಿದೆ. ಮೋಸ ಮಾಡಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ನಾನು ಸ್ವತಃ ರಾಜೀನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ" ಎಂದು ಬಿ. ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
"ನರೇಂದ್ರ ಮೋದಿ ಅವರು ಜನರ ಮತ ಕೇಳಲು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ವಿಶ್ವವೇ ಮೆಚ್ಚಿರುವ ನರೇಂದ್ರ ಮೋದಿ ಎಲ್ಲಿ?. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸರಿಸಮನಾಗುತ್ತಾರೆಯೇ?" ಎಂದು ಜನರನ್ನು ಪ್ರಶ್ನೆ ಮಾಡಿದ ಯಡಿಯೂರಪ್ಪ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಕ್ಷೇತ್ರ; 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆಯ ಬಾದಾಮಿಯಲ್ಲಿ ಕಣಕ್ಕಿಳಿದಿದ್ದರು. ಆದರೆ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ. ಟಿ. ದೇವೇಗೌಡ ವಿರುದ್ಧ ಸೋಲು ಕಂಡರು. ಬಾದಾಮಿಯಲ್ಲಿ 67,599 ಮತಗಳನ್ನು ಪಡೆದು ಜಯಗಳಿಸಿದರು. ಬಾದಾಮಿಯಲ್ಲಿ ಬಿಜೆಪಿಯಿಂದ ಬಿ. ಶ್ರೀರಾಮುಲು ಎದುರಾಳಿಯಾಗಿದ್ದರು. 65,903 ಮತಗಳನ್ನು ಪಡೆದು ಅವರು ಪ್ರಬಲ ಪೈಪೋಟಿಯನ್ನು ನೀಡಿದ್ದರು.
ಆದರೆ ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಬಾದಾಮಿ ದೂರ ಎಂಬ ಕಾರಣಕ್ಕೆ ಅವರು ಬೆಂಗಳೂರು ನಗರದ ಸಮೀಪದ ಕ್ಷೇತ್ರದ ಹುಡುಕಾಟದಲ್ಲಿದ್ದರು. ಕೋಲಾರದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಇತ್ತು. ಅಂತಿಮವಾಗಿ ರಾಹುಲ್ ಗಾಂಧಿ ಸಲಹೆಯಂತೆ ವರುಣದಿಂದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ವಿ. ಸೋಮಣ್ಣ ಸಿದ್ದರಾಮಯ್ಯ ಎದುರಾಳಿ.
ಸಿದ್ದರಾಮಯ್ಯ ಸೋಲಿಸಲೇಬೇಕು ಎಂದು ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣರನ್ನು ವರುಣದಲ್ಲಿ ಕಣಕ್ಕಿಳಿಸಲಾಗಿದೆ. ಬಿಜೆಪಿ ಸೋಮಣ್ಣಗೆ ಚಾಮರಾಜನಗರದಲ್ಲಿಯೂ ಕಣಕ್ಕಿಳಿಯಲು ಅವಕಾಶ ನೀಡಿದೆ.












Click it and Unblock the Notifications