ಪಂಜಾಬ್: ಆಪ್ ಶಾಸಕ ಮಾಜ್ರ ಮನೆ ಮೇಲೆ ಸಿಬಿಐ ದಾಳಿ
ನವದೆಹಲಿ, ಮೇ 7: ಬ್ಯಾಂಕ್ ವಂಚನೆ ಪ್ರಕರಣವೊಂದರ ಸಂಬಂಧ ಪಂಜಾಬ್‌ನ ಆಮ್ ಆದ್ಮಿ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಾಜ್ರಾಗೆ ಸೇರಿದ ಮನೆ, ಕಚೇರಿಗಳ ಮೇಲೆ ಸಿಬಿಐ ತಂಡಗಳು ದಾಳಿ ನಡೆಸಿ ಶೋಧ ಮಾಡಿವೆ. ಪಂಜಾಬ್ ರಾಜ್ಯದ ಸಂಗ್ರೂರ್ ಪಟ್ಟಣದಲ್ಲಿ ಅವರ ಮನೆ ಸೇರಿ ಮೂರು ಕಡೆ ರೇಡ್ ಮಾಡಲಾಗಿದೆ. ಇದು 41 ಕೋಟಿ ರೂ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಪ್ರಕರಣವಾಗಿದ್ದು ಸಿಬಿಐ ತನಿಖೆ ನಡೆಸುತ್ತಿದೆ.
ಸಿಬಿಐ ರೇಡ್‌ನಲ್ಲಿ ಸುಮಾರು 16.57 ಲಕ್ಷ ರೂ ಮೌಲ್ಯದ ನಗದು ಹಣ, ೮೮ ವಿದೇಶಿ ಕರೆನ್ಸಿ ನೋಟುಗಳು, ಕೆಲ ಆಸ್ತಿ ದಾಖಲೆಗಳು, ಹಲವು ಬ್ಯಾಂಕ್ ಖಾತೆಗಳು ಮತ್ತಿತರರ ಸಂಶಯಾಸ್ಪದ ದಾಖಲೆಗಳು ಅಧಿಕಾರಿಗಳಿಗೆ ಸಿಕ್ಕಿವೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ. ವಿವಿಧ ವ್ಯಕ್ತಿಗಳ ಸಹಿ ಇರುವ 94 ಬ್ಲ್ಯಾಂಕ್ ಚೆಕ್‌ಗಳು, ಅವರ ಆಧಾರ್ ಕಾರ್ಡ್‌ಗಳನ್ನು ಅಧಿಕಾರಿಗಳು ರೇಡ್ ವೇಳೆ ಮುಟ್ಟುಗೋಲು ಹಾಕಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಏನಿದು ವಂಚನೆ ಪ್ರಕರಣ?
ಅಮರ್ ಗಡ್ ಶಾಸಕ ಜಸ್ವಂತ್ ಸಿಂಗ್ ಮಾಜ್ರಾ ತಾರಾ ಕಾರ್ಪೊರೇಷನ್, ತಾರಾ ಹೆಲ್ತ್ ಫೂಡ್ಸ್ ಲಿ ಕಂಪನಿಗಳ ನಿರ್ದೇಶಕರಾಗಿದ್ದರು. ಲೂಧಿಯಾನದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 2011ರಿಂದ 2014ರ ಅವಧಿಯಲ್ಲಿ ನಾಲ್ಕು ಬಾರಿ ತಾರಾ ಕಾರ್ಪೊರೇಶನ್ ಕಂಪನಿ ಸಾಲ ಪಡೆದಿತ್ತು. ಸಾಲ ಮರುಪಾವತಿ ಮಾಡದ ಕಾರಣ ವಸೂಲಿಗೆ ಬಂದಾಗ ಹಲವು ದಾಖಲೆಗಳನ್ನ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಬ್ಯಾಂಕ್‌ಗೆ ಇದರಿಂದ 40.92 ಕೋಟಿ ರೂ ನಷ್ಟವಾಗಿದೆ ಎಂಬುದು ಸಿಬಿಐ ಮಾಡುತ್ತಿರುವ ಆರೋಪ.

ತಾರಾ ಕಾರ್ಪೊರೇಶನ್ ಯಾವ ಉದ್ದೇಶದಿಂದ ಸಾಲ ಪಡೆದಿತ್ತೋ ಅದಕ್ಕೆ ಆ ಹಣ ವಿನಿಯೋಗವಾಗಿಲ್ಲ. ಆ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಿರುವುದು ತಿಳಿದುಬಂದಿದೆ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 2014, ಮಾರ್ಚ್ 31ರಂದು ಈ ಸಾಲವನ್ನು ಎನ್‌ಪಿಎ ಎಂದು ಬ್ಯಾಂಕ್ ಘೋಷಿಸಿತು.

ಸಿಬಿಐ ಸಲ್ಲಿಸಿರುವ ಎಫ್‌ಐಅರ್‌ನಲ್ಲಿ ತಾರಾ ಕಾರ್ಪೊರೇಷನ್, ತಾರಾ ಹೆಲ್ತ್ ಫೂಡ್ಸ್, ಅದರ ನಿರ್ದೇಶಕರಾಗಿದ್ದ ಆಪ್ ಶಾಸಕ ಜಸ್ವಂತ್ ಸಿಂಗ್ ಮಾಜ್ರಾ, ಅವರ ಸಹೋದರರಾದ ಬಲವಂತ್ ಸಿಂಗ್ ಮತ್ತು ಕುಲವಂತ್ ಸಿಂಗ್, ಹಾಗು ಅವರ ಸಂಬಂಧಿ ತೇಜಿಂದರ್ ಸಿಂಗ್ ಇವರ ಹೆಸರೂ ಎಫ್‌ಐಆರ್‌ನಲ್ಲಿದೆ. ಎಫ್‌ಐಆರ್‌ನಲ್ಲಿರುವ ವ್ಯಕ್ತಿಗಳೆಲ್ಲರೂ ಆ ಕಂಪನಿಗಳ ನಿರ್ದೇಶಕರು ಮತ್ತು ಗ್ಯಾರಂಟರ್‌ಗಳಾಗಿದ್ಧಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications