ಆಂಧ್ರದ ದೇವಾಲಯದಲ್ಲಿ 3 ಬೆಳ್ಳಿಯ ಸಿಂಹಗಳು ನಾಪತ್ತೆ!
ಅಮರಾವತಿ, ಸೆಪ್ಟೆಂಬರ್ 17 : ಆಂಧ್ರ ಪ್ರದೇಶದ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವಾರ್ಲ ದೇವಸ್ಥಾನದಲ್ಲಿ ಆಭರಣಗಳು ನಾಪತ್ತೆಯಾಗಿವೆ. ರಥಕ್ಕೆ ಅಳವಡಿಕೆ ಮಾಡುವ ಮೂರು ಬೆಳ್ಳಿ ಲೇಪಿತ ಸಿಂಹಗಳು ಕಾಣೆಯಾಗಿದ್ದು, ತನಿಖೆ ಆರಂಭವಾಗಿದೆ.
ವಿಜಯವಾಡದಲ್ಲಿರುವ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವಾರ್ಲ ದೇವಸ್ಥಾನ ಕನಕದುರ್ಗಮ್ಮಾ ದೇವಾಲಯ ಎಂದೇ ಖ್ಯಾತಿ ಪಡೆದಿದೆ. ದೇವಾಲಯದ ಕಾರ್ಯಕಾರಿ ಅಧಿಕಾರಿ ಎಂ. ಸುರೇಶ್ ಬಾಬು ಬೆಳ್ಳಿಯ ಸಿಂಹಗಳು ನಾಪತ್ತೆಯಾಗಿದ್ದು ಖಚಿತಪಡಿಸಿದ್ದಾರೆ.
ದೇವಾಲಯದ ಆಡಳಿತ ಮಂಡಳಿ ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದೆ. ದೇವಾಲಯದ ಭದ್ರತಾ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಸರ್ಕಾರಕ್ಕೆ ಈ ಕುರಿತು ಕೆಲವೇ ದಿನಗಳಲ್ಲಿ ವರದಿಯನ್ನು ನೀಡಲಿದ್ದಾರೆ.

ಮಂಗಳವಾರ ದೇವಾಲಯದ ರಥದ ಭದ್ರತೆಯನ್ನು ಹೆಚ್ಚಿಸಲು ಪರಿಶೀಲನೆ ನಡೆಸಿದಾಗ ಸಿಂಹಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 2019ರ ಏಪ್ರಿಲ್‌ನಲ್ಲಿ ರಥೋತ್ಸವದ ಸಂದರ್ಭದಲ್ಲಿ ಸಿಂಹಗಳನ್ನು ಕೊನೆಯದಾಗಿ ಬಳಕೆ ಮಾಡಲಾಗಿತ್ತು.
ದೇವಾಲಯದ ರಥಕ್ಕೆ ಸಿಸಿಟಿವಿ ಕಣ್ಗಾವಲು ಇದೆ. ಭದ್ರತಾ ವಿಭಾಗದ ಸಿಬ್ಬಂದಿ ಅದನ್ನು ನೋಡಿಕೊಳ್ಳುತ್ತಾರೆ. ಒಟ್ಟು 160 ಕ್ಯಾಮರಾಗಳ 15 ದಿನದ ದೃಶ್ಯಾವಳಿಗಳನ್ನು ಪರಿಶೀಳನೆ ಮಾಡಲಾಗುತ್ತಿದೆ.
ದೇವಾಲಯದ ಲಾಕರ್ ಸೇರಿದಂತೆ ಉಳಿದ ಕಡೆ ಬೆಳ್ಳಿಯ ಸಿಂಹಗಳಿಗಾಗಿ ಹುಡುಕಾಟ ನಡೆದಿದೆ. ಆಡಳಿತ ಮಂಡಳಿ ಈ ಕುರಿತು ಪೊಲೀಸರಿಗೆ ಅಧಿಕೃತವಾಗಿ ಇನ್ನೂ ದೂರು ನೀಡಿಲ್ಲ. ಯುಗಾರಿ ಮತ್ತು ಬ್ರಹೋತ್ಸವದ ಸಂದರ್ಭದಲ್ಲಿ ಮಾತ್ರ ಮರದ ರಥಕ್ಕೆ ಬೆಳ್ಳಿಯ 3 ಸಿಂಹಗಳನ್ನು ಅಳವಡಿಸಿ ಉತ್ಸವ ನಡೆಸಲಾಗುತ್ತಿತ್ತು.












Click it and Unblock the Notifications