ವೆಂಕಟೇಶ್ವರ ಭಕ್ತಿ ಚಾನೆಲ್‌ಗೆ ಪತ್ರಕರ್ತೆ ಸ್ವಪ್ನ ಸುಂದರಿ ನಿರ್ದೇಶಕಿಯಾಗಿ ನೇಮಕ
ಹೈದರಾಬಾದ್, ಅಕ್ಟೋಬರ್ 14: ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಮಂಡಳಿಗೆ ಇನ್ಫೋಸಿಸ್ ಫೌಂಡೇಷನ್ ಸುಧಾಮೂರ್ತಿ ಸೇರಿದಂತೆ ಅನೇಕ ಹಿರಿಯರನ್ನು ನೇಮಿಸಿದ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಈಗ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (SVBC) ಮುಖ್ಯಸ್ಥ ಸ್ಥಾನಕ್ಕೆ ಜನಪ್ರಿಯ ನಿರೂಪಕಿ, ಪತ್ರಕರ್ತೆಯನ್ನು ಕರೆ ತರಲು ಮುಂದಾಗಿರುವ ಸುದ್ದಿ ಬಂದಿದೆ.
ಲಭ್ಯ ಮಾಹಿತಿಯಂತೆ ಪೃಥ್ವಿರಾಜ್ ಮುಖ್ಯಸ್ಥರಾಗಿರುವ ಎಸ್ ವಿ ಬಿಸಿ ವಾಹಿನಿಗೆ ಪತ್ರಕರ್ತೆ ಸ್ವಪ್ನ ಸುಂದರಿ ಮುಖ್ಯಸ್ಥರಾಗಲಿದ್ದಾರೆ. ಈ ಕುರಿತಂತೆ ಶೀಘ್ರದಲ್ಲೇ ಅಧಿಕೃತ ಆದೇಶ ಹೊರ ಬರಲಿದೆ. ಟಿವಿ9 ಸುದ್ದಿ ವಾಹಿನಿಯಲ್ಲಿ ನಿರೂಪಕಿ, ವರದಿಗಾರ್ತಿಯಾಗಿ ಸುಮಾರು 15 ವರ್ಷಕ್ಕೂ ಅಧಿಕ ಅನುಭವವನ್ನು ಹೊಂದಿದ್ದ ಸ್ವಪ್ನ ಅವರು ನಂತರ ಜಗನ್ ಒಡೆತನದ ಸಾಕ್ಷಿ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿಯಾದರು. ಎಫ್ ಎಂ ವಾಹಿನಿ, ಸಂಗೀತಕ್ಷೇತ್ರದಲ್ಲೂ ಕೈಯಾಡಿಸಿರುವ ಸ್ವಪ್ನ ಅವರು ಮಾಧ್ಯಮ ಸಲಹೆಗಾರ್ತಿಯಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ. ನಂತರ ಈ ಸ್ಥಾನಕ್ಕೆ ವೈಎಸ್ ಜಗನ್ ಪತ್ನಿ ವೈಎಸ್ ಭಾರತಿಯನ್ನು ನೇಮಿಸಲಾಯಿತು. ಭಾರತಿ ಹಾಗೂ ಸಾಕ್ಷಿ ಇಬ್ಬರು ಉತ್ತಮ ಗೆಳತಿಯರು ಎಂಬುದು ಬಹಿರಂಗ ಸತ್ಯ.

ಸ್ವಪ್ನ ಅವರಿಗಿಂತ ಮುಂಚಿತವಾಗಿ ಸಜ್ಜಲ ರಾಮಕೃಷ್ಣ ರೆಡ್ಡಿ, ದೇವುಲಪಲ್ಲಿ ಅಮರ್, ಕೆ ರಾಮಚಂದ್ರ ಮೂರ್ತಿ, ಜಿವಿಡಿ ಕೃಷ್ಣಮೋಹನ್, ಕೆ ಶ್ರೀಹರಿ ಹಾಗೂ ದೇವಿರೆಡ್ಡಿ ಶ್ರೀನಾಥ್ ರೆಡ್ಡಿ ಮೊದಲಾದ ಹಿರಿಯ ಪತ್ರಕರ್ತರಿಗೆ ಸಲಹಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಿ ಉನ್ನತ ಹುದ್ದೆಗಳನ್ನು ನೀಡಿದ್ದಾರೆ. ಸಂಪುಟ ವಿಸ್ತರಣೆ, ಟಿಟಿಡಿ ಮಂಡಳಿ ನೇಮಕಾತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕದಲ್ಲೂ ಜಗನ್ ಸ್ವಜನಪಕ್ಷಪಾತಿ ಎಂಬುದನ್ನು ನಿರೂಪಿಸಿದ್ದರು. ಈಗ ಎಸ್ವಿಬಿ ಚಾನೆಲ್ ಮುಖ್ಯಸ್ಥೆಯಾಗಿ ಸ್ವಪ್ನರನ್ನು ನೇಮಿಸಿದರೆ ಮತ್ತೆ ಚರ್ಚೆಗೆ ಗ್ರಾಸವಾಗಲಿದೆ.












Click it and Unblock the Notifications