ತಿರುಪತಿ ಭಕ್ತರ ಸಂಖ್ಯೆ ಏರಿಕೆ, ಹುಂಡಿ ಸಂಗ್ರಹ ಇಳಿಕೆ
ತಿರುಪತಿ, ಅಕ್ಟೋಬರ್ 9: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿ ಸಂಗ್ರಹದಲ್ಲಿ ಇಳಿಕೆಯಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸಮೂಹದಲ್ಲಿ ಭಾರಿ ಏರಿಕೆಯಾಗಿದ್ದರೂ, ಕಳೆದ 9 ದಿನಗಳ ವಾರ್ಷಿಕ ಬ್ರಹ್ಮೋತ್ಸವದಲ್ಲಿ ಹುಂಡಿ ಸಂಗ್ರಹದಲ್ಲಿ ಇಳಿಕೆಯಾಗಿದೆ.
ಒಂಬತ್ತು ದಿನಗಳ ಬ್ರಹ್ಮೋತ್ಸವಕ್ಕೆ ಮಂಗಳವಾರ ತೆರೆಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಿದ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಹಾಗಿದ್ದರೂ ಹುಂಡಿ ಸಂಗ್ರಹದಲ್ಲಿ ಕಡಿಮೆಯಾಗಿದೆ.
9 ದಿನ ನಡೆದ ಬ್ರಹ್ಮೋತ್ಸವದಲ್ಲಿ ಸುಮಾರು 7.7 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಕಳೆದ ವರ್ಷ ನಡೆದ ಬ್ರಹ್ಮೋತ್ಸವದಲ್ಲಿ 5.9 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದರು. ಭಕ್ತರ ಸಂಖ್ಯೆ ಸುಮಾರು ಎರಡು ಲಕ್ಷದಷ್ಟು ಹೆಚ್ಚಳವಾಗಿದೆ. ಹಾಗೆಯೇ ಕಳೆದ ವರ್ಷ 2.17 ಲಕ್ಷ ಮಂದಿ ತಿಮ್ಮಪ್ಪನ ಸನ್ನಿಧಾನದಲ್ಲಿ ಮುಡಿ ನೀಡಿದ್ದರು. ಮುಡಿಕೊಟ್ಟವರ ಸಂಖ್ಯೆ ಈ ಬಾರಿ ಶೇ 50ರಷ್ಟು ಹೆಚ್ಚಳವಾಗಿದ್ದು, 3.23 ಲಕ್ಷ ಮಂದಿ ಮುಡಿ ನೀಡಿದ್ದಾರೆ.

ಆದರೆ ಕಳೆದ ವರ್ಷದ ಈ ಸಾಲಿಗೆ ಹೋಲಿಸಿದರೆ ಒಟ್ಟಾರೆ ಹುಂಡಿ ಸಂಗ್ರಹದಲ್ಲಿ 12.75 ಲಕ್ಷ ರೂ. ಕುಸಿತಕಂಡಿದೆ. ಕಳೆದ ವರ್ಷ 20.52 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗಿತ್ತು. ಈ ಸಾಲಿನಲ್ಲಿ 20.40 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗಿದೆ.
ಲಡ್ಡು ಹಂಚಿಕೆಯಲ್ಲಿಯೂ ಈ ಬಾರಿ ಏರಿಕೆಯಾಗಿದೆ. ಕಳೆದ ವರ್ಷ 24.01 ಲಡ್ಡುಗಳನ್ನು ಹಂಚಲಾಗಿತ್ತು. ಈ ವರ್ಷ 34.01 ಲಕ್ಷ ಲಡ್ಡುಗಳನ್ನು ಹಂಚಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್ ತಿಳಿಸಿದ್ದಾರೆ.












Click it and Unblock the Notifications