ವೈರಲ್ ಸುದ್ದಿ : ರೇಷ್ಮೆ ಸೀರೆ ಮೇಲೆ 13 ಭಾಷೆಯಲ್ಲಿ 32,200 ಬಾರಿ ಜೈ ಶ್ರೀರಾಮ್ ಬರೆದ ನೇಕಾರ
ಆಂಧ್ರಪ್ರದೇಶ, ಏಪ್ರಿಲ್ 21 : ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ನೇಕಾರರೊಬ್ಬರು ಕೈ ಮಗ್ಗದಲ್ಲಿ ತಯಾರಿಸಿದ ರೇಷ್ಮೆ ಸೀರೆಯಲ್ಲಿ 13 ಭಾರತೀಯ ಭಾಷೆಗಳಲ್ಲಿ 32,200 ಬಾರಿ ಜೈ ಶ್ರೀರಾಮ್ ಅಂತ ಬರೆದು ದಾಖಲೆ ನಿರ್ಮಿಸಿದ್ದಾರೆ. ಈ ರೇಷ್ಮೆ ಸೀರೆಯು 60 ಮೀಟರ್ ಉದ್ದ ಹಾಗೂ 44 ಇಂಚು ಅಗಲವಿದ್ದು, ಹಳದಿ ಹಾಗೂ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಿದೆ.
ಧರ್ಮಾವರಂನ ನೇಕಾರರಾದ 40 ವರ್ಷದ ಜುಜಾರು ನಾಗರಾಜು ಕೈಮಗ್ಗ ನಡೆಸುತ್ತಿದ್ದು, ಈ ರೇಷ್ಮೆ ಸೀರೆಯನ್ನು ಸ್ವತಃ ಅವರೇ ತಮ್ಮ ಕೈಯಲ್ಲಿ ನೇಯ್ದಿದ್ದಾರೆ. ಅಲ್ಲದೆ ಈ ವಿಶೇಷ ರೇಷ್ಮೆ ಸೀರೆಗೆ "ರಾಮ ಕೋಟಿ ವಸ್ತ್ರಂ" ಅಂತ ನಾಮಕರಣ ಮಾಡಿದ್ದಾರೆ. ಈ ಸೀರೆಯಲ್ಲಿ ಕೇವಲ ಬೇರೆ ಬೇರೆ ಭಾಷೆಯಲ್ಲಿ ಬರೆದಿರುವ ಶ್ರೀ ರಾಮನ ಘೋಷಣೆಗಳು ಮಾತ್ರವಲ್ಲದೆ, ರಾಮಾಯಣದಲ್ಲಿರುವ ರಾಮನ 168 ವಿಭಿನ್ನ ಚಿತ್ರಗಳನ್ನು ಸಹ ಸೀರೆಯ ಬಾರ್ಡರ್‌ನಲ್ಲಿ ಚಿತ್ರಿಸಿದ್ದಾರೆ.

ಈ ವಿಶಿಷ್ಟವಾದ ರೇಷ್ಮೆ ಸೀರೆಯನ್ನ ಸಾಕಷ್ಟು ಶ್ರಮ ಹಾಗೂ ಹಣವನ್ನ ನಾಗರಾಜುರವರು ವ್ಯಯ ಮಾಡಿದ್ದಾರೆ. 16 ಕೆ.ಜಿ ತೂಕದ ರೇಷ್ಮೆ ಬಟ್ಟೆಯನ್ನು ವಿನ್ಯಾಸಗೊಳಿಸಲು ಮತ್ತು ನೇಯಲು ಸುಮಾರು ನಾಲ್ಕು ತಿಂಗಳನ್ನ ತೆಗೆದುಕೊಂಡಿದ್ದಾರೆ. ಇವರ ಸಹಾಯಕ್ಕಾಗಿ ಮೂರು ಜನರನ್ನು ನೇಮಿಸಿಕೊಂಡಿದ್ದರು. ಅಲ್ಲದೆ ಈ ಸೀರೆಗೆ ನಾಗರಾಜು ರವರು 1.5 ಲಕ್ಷ ಹಣವನ್ನ ವಿನಿಯೋಗಿಸಿ ಈ ಸೀರೆಯನ್ನ ತಯಾರಿಸಿದ್ದಾರೆ. ಸದ್ಯ ಈ ಸೀರೆಯನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಊಡುಗೊರೆಯಾಗಿ ನೀಡಲು ನಾಗರಾಜು ರವರು ನಿರ್ಧರಿಸಿದ್ದಾರೆ.

ಸದ್ಯ ನೇಕಾರ ನಾಗರಾಜು ರವರು ತಯಾರಿಸಿರುವ ಈ ಸೀರೆಯ ಪೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪೋಟೋಸ್ ನೋಡಿದ ನೆಟ್ಟಿಗರು ನಾಗರಾಜುರವರ ಶ್ರಮ ಹಾಗೂ ರಾಮನ ಮೇಲೆ ಇಟ್ಟಿರುವ ಭಕ್ತಿಗೆ ಮನಸೋತಿದ್ದಾರೆ. ನೂರಾರು ಮಂದಿ ಜೈ ಶ್ರೀರಾಮ್ ಅಂತ ಕಮೆಂಟ್ ಮಾಡಿದ್ದಾರೆ.












Click it and Unblock the Notifications